Responsive Ad Slot

ಥಾಯ್ಲೆಂಡ್ ಪ್ರವಾಸ : ಹಣ ಉಳಿಸುವದು ಹೇಗೆ?

ಈ ಅಂತರಾಷ್ಟ್ರೀಯ ಪ್ರವಾಸ ಎಂದರೇ ಹಾಗೆ. ವಿಮಾನದ ಖರ್ಚು, ಹೋಟೆಲ್ ಖರ್ಚು, ಎಂಟ್ರಾನ್ಸ್ ಫೀ, ವೀಸಾ ಇಷ್ಟಕ್ಕೆ ಖರ್ಚಾಗುವದರಲ್ಲಿ ನಮ್ಮಂತಹ ಮಧ್ಯಮ ವರ್ಗದವರ ಬ್ಯಾಂಕ್ ಬ್ಯಾಲೆನ್ಸ್ ಸೋತು ಬಿದ್ದಿರುತ್ತದೆ. 

ನಮ್ಮಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಅನ್ನುತ್ತೇವೆ. ಹಾಗೆಯೇ ಸ್ವಲ್ಪ ತಲೆ ಓಡಿಸಿದರೆ ನಾವು ಬೇರೆ ದೇಶಗಳಲ್ಲೂ ಕಡಿಮೆ ಖರ್ಚಿನಲ್ಲಿ ಕಾಲ ಕಳೆದು ಬರಬಹುದು.

ನೆನಪಿಡಿ ಈ ಹಣ ಉಳಿಸುವ ಟಿಪ್ಸ್ ಗಳು ಕೇವಲ ಮಧ್ಯಮ ವರ್ಗದವರಿಗೆ ಮಾತ್ರ. ಹಣವಂತರಿಗೆ ಅಲ್ಲ! ನಿಮ್ಮ ಬಳಿ ಸಾಕಷ್ಟು ಹಣ ಇದ್ದರೆ ಎಲ್ಲ ಟಿಪ್ಸ್ ಅನುಸರಿಸ ಬೇಕಿಲ್ಲ. ಆದರೂ ಕೆಲವು ಟಿಪ್ಸ್ ಆದರೂ ನಿಮಗೆ ಸಹಾಯ ಆದೀತು. ಒಮ್ಮೆ ಈ ಲೇಖನ ಪೂರ್ತಿ ಓದಿ ನೋಡಿ.

ಥಾಯ್ಲೆಂಡ್ ನಲ್ಲಿ ಆ ತರಹದ ಹಣ ಉಳಿಸುವ ಯಾವ ಯಾವ ಮಾರ್ಗಗಳಿವೆ ಎಂಬುದನ್ನು ಇಲ್ಲಿ ತಿಳಿಸುತ್ತೇನೆ. ಹೆಚ್ಚಿನ ಯುಕ್ತಿಗಳು ಬೇರೆ ದೇಶಗಳಿಗೆ ಕೂಡಾ ಅನ್ವಯ ಆಗುತ್ತೆ.

ಬನ್ನಿ ಈಗ ನೇರವಾಗಿ ಸೂತ್ರಗಳನ್ನು ನೋಡಿ.

ಥಾಯ್ಲೆಂಡ್ ನಲ್ಲಿ ಹಣ ಉಳಿಸಲು ಸೂತ್ರಗಳು

೧. ಭಾರತದಲ್ಲಿದ್ದಾಗ ಸಿದ್ದತೆಗಳು

ನಿಮ್ಮ ಹಣ ಉಳಿಸುವ ಅವಕಾಶಗಳು ಥಾಯ್ಲೆಂಡಿಗೆ ಹೋದ ಮೇಲಲ್ಲ ಭಾರತದಲ್ಲೇ ಪ್ಲ್ಯಾನ್ ಮಾಡುವಾಗಲೇ ಆರಂಭ ಆಗುತ್ತೆ.

ಸೂತ್ರ ೧.೧ : ಪ್ರವಾಸದ ಪ್ಯಾಕೇಜ್

ನೀವು ಪ್ಯಾಕೇಜ್ ಟ್ರಿಪ್ ಬುಕ್ ಮಾಡುವದರಿಂದ ಅನುಕೂಲ ಏನೆಂದರೆ ಅವರು ಹೆಚ್ಚಿನ ಬುಕಿಂಗ್ ಹಾಗೂ ಪ್ಲಾನಿಂಗ್ ಅವರೇ ಮಾಡುತ್ತಾರೆ. ನಿಮಗೆ ತಲೆ ಬಿಸಿ ಇಲ್ಲ. ಹಾಗೆಯೇ ಕಮಿಶನ್ ಸಹ ತೆಗೆದು ಕೊಳ್ಳುತ್ತಾರೆ.

ಆದರೆ ನೀವು ಈಗಾಗಲೇ ತುಂಬಾ ಅಂತರಾಷ್ಟ್ರೀಯ ಪ್ರವಾಸ ಮಾಡಿದ್ದಲ್ಲಿ ನೀವೇ ಸಹ ಪ್ಲಾನ್ ಮಾಡಿ ಕೇವಲ ವಿಮಾನ ಟಿಕೆಟ್ ಹಾಗೂ ಹೋಟೆಲ್ / ಹೋಂ ಸ್ಟೇ ಬುಕ್ ಮಾಡಿ ಥಾಯ್ಲೆಂಡ್ ಅಲ್ಲೇ ಲೋಕಲ್ ಟೂರಿಸ್ಟ್ ಪ್ಯಾಕೇಜ್ ಬುಕ್ ಮಾಡಬಹುದು.

ಇದನ್ನು ನಾನು ಮೊದಲ ಬಾರಿಗೆ ಹೋಗುವವರಿಗೆ ಹಾಗೂ ಅಂತರಾಷ್ಟ್ರೀಯ ಪ್ರವಾಸ ಒಮ್ಮೆಯೂ ಮಾಡದವರಿಗೆ ರೆಕಮೆಂಡ್ ಮಾಡುವದಿಲ್ಲ. ಯಾಕೆಂದರೆ ಸರಿಯಾಗಿ ಪ್ಲ್ಯಾನ್ ಮಾಡದಿದ್ದರೆ ಅದರಲ್ಲೂ ಪ್ರವಾಸದ ಸೀಸನ್ ಅಲ್ಲಿ ನಿಮಗೆ ಲೋಕಲ್ ಟ್ರಿಪ್ ಹೊತ್ತು ಹೊತ್ತಿಗೆ ಆಗದೇ ಸಮಯ ವ್ಯರ್ಥ ಆದೀತು.

ನಿಮಗೆ ವಿದೇಶಿ ಪ್ರವಾಸದ ಅನುಭವ ಇದ್ದರೆ, ಭಾಷೆ ಬರದಿದ್ದರೂ ಎಲ್ಲವನ್ನು ನಡೆಸಿಕೊಂಡು ಹೋಗುವ ಚಾಕಚಕ್ಯತೆ ಇದ್ದರೆ  ಮಾತ್ರ ಸ್ವಂತ ರಿಸ್ಕ್ ತೆಗೆದುಕೊಂಡು ಹೋಗಿ ಇಲ್ಲದಿದ್ದರೆ ಪ್ಯಾಕೇಜ್ ಮೂಲಕ ಹೋಗುವದು ಉತ್ತಮ.

ಸೂತ್ರ ೧.೨ : ವಿಮಾನದಲ್ಲಿ ಇಕಾನಾಮಿ ಕ್ಲಾಸ್ ಅಲ್ಲಿ ಬುಕ್ ಮಾಡಿ

ಬ್ಯುಸಿನೆಸ್ ಕ್ಲಾಸ್ ಬದಲು ವಿಮಾನದ ಇಕಾನಾಮಿ ಕ್ಲಾಸ್ ಅಲ್ಲಿ ಹೋಗಿ. ಆಗ ವಿಮಾನದ ಟಿಕೆಟ್ ಹಣ ಉಳಿತಾಯ ಆಗುತ್ತೆ. ವಿಮಾನ ಟಿಕೆಟ್ ಕನಿಷ್ಟ ಒಂದು ತಿಂಗಳಿಗಿಂತ ಮುಂಚೆ ಬುಕ್ ಮಾಡಿ. ಕೊನೆಯ ಗಳಿಗೆಯಲ್ಲಿ ಬೆಲೆ ಜಾಸ್ತಿ.

ಸೂತ್ರ ೧.೩ : ಭಾರತದಲ್ಲೇ ವೀಸಾ ಮಾಡಿಸಿ

ಭಾರತದಲ್ಲೇ ವೀಸಾ ಮಾಡಿಸಿಕೊಂಡರೆ ನಿಮಗೆ ಕಡಿಮೆ ಹಣದಲ್ಲಿ ವೀಸಾ ಆಗುತ್ತೆ. ಅಲ್ಲಿ ಹೋಗಿ ತತ್ಕಾಲ ವೀಸಾಗಳು ಜಾಸ್ತಿ ಖರ್ಚು. ಹಾಗೂ ಅನೇಕ ಬಾರಿ ನಿಮಗೆ ಮಿಸ್ಸಿಂಗ್ ಇರುವ ಡಾಕ್ಯುಮೆಂಟ್ ಗಳಿಗೆ ಒದ್ದಾಡಬೇಕು.

ಸೂತ್ರ ೧.೪ : ಭಾರತದಲ್ಲೇ ಫಾರೆಕ್ಸ್ ಕಾರ್ಡ್ ಹಾಗೂ ಕ್ಯಾಶ್ ಬದಲಾವಣೆ ಮಾಡಿಸಿ

ಭಾರತದಲ್ಲೇ ಫಾರೆಕ್ಸ್ ಮಾಡಿಸುವದರಿಂದ ಕಮಿಶನ್ ಕಡಿಮೆ. ಅದನ್ನು ಕೂಡಾ ಏರ್ ಪೋರ್ಟ್ ಅಲ್ಲಿ ಅಲ್ಲ ನಿಮ್ಮ ಸಿಟಿಯಲ್ಲಿ ಮಾಡಿಸಿ. ನೆನಪಿಡಿ ಏರ್ ಪೋರ್ಟ್ ಅಲ್ಲಿ ದುಪ್ಪಟ್ಟು ಚಾರ್ಜ್ ಕೊಟ್ಟು ಫಾರೆಕ್ಸ್ ಕೊಳ್ಳಬೇಕು. ಸಾಧ್ಯವಿದ್ದರೆ ಆನ್ ಲೈನ್ ಅಲ್ಲ ಫಾರೆಕ್ಸ್ ಸೆಂಟರ್ ಗೆ ನೀವೇ ಹೋಗಿ ಮಾಡಿಸಿ. ಆಗ ನಿಮಗೆ ಉತ್ತಮ ಬೆಲೆಗೆ ಥಾಯಿ ಭಾಟ್ ಸಿಗುತ್ತದೆ.

ಸೂತ್ರ ೧.೫ : ಒಂದಿಷ್ಟು ಅಗತ್ಯ ವಸ್ತು, ಮೆಡಿಸಿನ್, ತಿನಿಸು, ಆಹಾರ ಇಲ್ಲಿಂದಲೇ ಒಯ್ಯಿರಿ

ಅಗತ್ಯ ಡಿಯಾಡ್ರಂಟ್, ಶೇವಿಂಗ್ ಸೆಟ್/ ಬ್ಲೇಡ್, ಪೌಡರ್ / ಕ್ರೀಂ, ಮೇಕಪ್ ಸಾಮಾನುಗಳು, ದಿನ ತೆಗೆದುಕೊಳ್ಳುವ ಮೆಡಿಸಿನ್ ಇಲ್ಲಿಂದಲೇ ಒಯ್ಯಿರಿ. ವಾಂತಿ/ ತಲೆನೋವಿನಂತಹ ಮಾತ್ರೆ ಸಹ ಜೊತೆಯಲ್ಲಿರಲಿ. ಔಷದಿಗೆ ಡಾಕ್ಟರ್ ಪ್ರಿಸ್ಕ್ರಿಪ್ಶನ್ ಇರಲಿ.

ಅಕ್ಕಿ, ಉಪ್ಪಿನ ಕಾಯಿ,  ಮಕ್ಕಳ ಆಹಾರ, ಸಿದ್ಧ ಆಹಾರ ಕೂಡಾ ಸ್ವಲ್ಪ ಒಯ್ಯಿರಿ. ಆಗ ಒಂದೆರಡು ದಿನ ಸಂಜೆಯ ವೇಳೆಗೆ ಅದರಿಂದ ಮ್ಯಾನೇಜ್ ಮಾಡ ಬಹುದು.

ಹಾಗಂತ ತುಂಬಾ ಕೂಡಾ ಒಯ್ಯಬೇಡಿ. ಹೋದಲ್ಲೂ ಸ್ವಲ್ಪ ಅಲ್ಲಿನ ಆಹಾರದ ರುಚಿ ನೋಡೋಣ ಅಲ್ವ.

ನೆನಪಿಡಿ ಇದನ್ನು ನಿಮ್ಮ ಚೆಕಿನ್ ಬ್ಯಾಗ್ ಅಲ್ಲೇ ಇಡಬೇಕು. ಹ್ಯಾಂಡ್ ಬ್ಯಾಗ್ ಅಲ್ಲಿ ಅಲ್ಲ. ಇಲ್ಲದಿದ್ದರೆ ಸೆಕ್ಯುರಿಟಿಯವರು ತೆಗೆದು ಬಿಸಾಕುತ್ತಾರೆ.

ಸೂತ್ರ ೧.೬ : ಸೀಸನ್ ಅಲ್ಲಿ ಹೋಗಬೇಡಿ

ನವೆಂಬರ್ ನಿಂದ ಮಾರ್ಚ್ ಥಾಯ್ಲೆಂಡ್ ಅಲ್ಲಿ ಸೀಸನ್. ಆ ಸಂದರ್ಭದಲ್ಲಿ ಎಲ್ಲದರ ಬೆಲೆ ಜಾಸ್ತಿ. ಅಡ್ವಾನ್ಸ್ ಬುಕಿಂಗ್ ಇಲ್ಲದಿದ್ದರೆ ಕಷ್ಟ.  ಎಪ್ರಿಲ್, ಮೇ ಸ್ವಲ್ಪ ಸೆಕೆ ಜಾಸ್ತಿ. ಜೂನ್ - ಅಗಸ್ಟ್ ಮಳೆ ಜಾಸ್ತಿ. ಸಾಧ್ಯವಾದರೆ ಸಪ್ಟೆಂಬರ್, ಅಕ್ಟೋಬರ್ ಉತ್ತಮ.

ಸೂತ್ರ ೧.೭ : ಉಳಿಯಲು ವ್ಯವಸ್ಥೆ

ಸಿಟಿಯಲ್ಲೇ ಇರುವ ಹೋಟೆಲ್ ಬುಕ್ ಮಾಡಿ. ಹತ್ತಿರದಲ್ಲೇ ಒಂದು ಸೆಲ್ಫ್ ಸರ್ವೀಸ್ ಲಾಂಡ್ರಿ, ಇಂಡಿಯನ್ ಹೋಟೆಲ್ ಇದ್ದರೆ ಉತ್ತಮ. ಗೂಗಲ್ ಮ್ಯಾಪ್ ಅಲ್ಲಿ ಅಕ್ಕ ಪಕ್ಕ ಏನಿದೆ ನೋಡಿದರೆ ತಿಳಿಯುತ್ತದೆ. ಏರ್ ಬಿ ಎನ್ ಬಿ ಮೂಲಕ ಕೂಡಾ ಟ್ರೈ ಮಾಡಬಹುದು. ಒಮ್ಮೆ ಬೇರೆಯವರ ವಿಮರ್ಶೆ ಓದಿ. 

ಫೈವ್ ಸ್ಟಾರ್ ಹೋಟೆಲ್ ಬದಲು ನಾಲ್ಕು / ಮೂರು ಸ್ಟಾರ್ ಹೋಟೆಲ್ ಹಣಕ್ಕೆ ತಕ್ಕ ಮೌಲ್ಯ ನೀಡುತ್ತವೆ.

ಹೋಟೆಲ್ ಅಲ್ಲೂ ತೀರಾ ಪ್ರಿಮಿಯಂ ರೂಂ ಬೇಡ. ಇಕಾನಾಮಿ ರೂಂ ಸಾಕು. 

ಚಿಕ್ಕ ಮಕ್ಕಳಿಗೆ ಪ್ರತ್ಯೇಕ ರೂಂ ಬೇಡ. ಇಬ್ಬರು ದೊಡ್ಡವರು ಮತ್ತು ಇಬ್ಬರು ಮಕ್ಕಳಿಗೆ ಒಂದೇ ರೂಂ ಸಾಕು. ತೀರಾ ದೊಡ್ಡ ಮಕ್ಕಳಿದ್ದರೆ ಮಾತ್ರ ಪ್ರತ್ಯೇಕ ರೂಂ ಮಾಡಿ.

ಹೋಟೆಲ್ ಕೂಡಾ ಒಂದು ತಿಂಗಳು ಮುಂಚೆ ಮಾಡಿ. ಕೊನೆಯ ಹಂತದಲ್ಲಿ ಬೆಲೆ ಜಾಸ್ತಿ ಇರುತ್ತದೆ. ಆಗ ಕಡಿಮೆ ದರದ ರೂಂ ಇರುವ ಹೋಟೆಲ್ ಗಳಲ್ಲಿ ಸಿಗದೇ ಹೋಗಬಹುದು.

ಸೂತ್ರ ೧.೮ : ಲಗ್ಗೇಜ್ ತೀರಾ ಜಾಸ್ತಿ ಬೇಡ

ಎಷ್ಟು ಬೇಕೋ ಅಷ್ಟೇ ಬಟ್ಟೆ ತೆಗೆದು ಕೊಂಡು ಹೋಗಿ. ಜಾಸ್ತಿ ಬೇಡ. ಉದಾಹರಣೆಗೆ ಹದಿನೈದು ದಿನ ಹೋಗುತ್ತಿದ್ದರೆ ಹದಿನೈದು ಚಡ್ಡಿ / ಹದಿನೈದು ಬನಿಯನ್ ಬೇಡ! ಐದಾರು ಸಾಕು.

ನೆನಪಿಡಿ ನಿಮಗೆ ಸೆಲ್ಫ್ ಸರ್ವೀಸ್ ಲಾಂಡ್ರಿ ಸಿಟಿಗಳಲ್ಲಿ ಸಿಗುತ್ತೆ. ಅದನ್ನು ಬಳಸಿ ಹತ್ತು ಕೆಜಿ ಬಟ್ಟೆ ಮುನ್ನೂರು ರುಪಾಯಿ ಒಳಗೆ ತೊಳೆದು ಓಣಗಿಸಿ ಕೊಳ್ಳಬಹುದು. ತೀರಾ ಜಾಸ್ತಿ ಬಟ್ಟೆ ತೆಗೆದು ಕೊಂಡು ಹೋಗುವದಕ್ಕಿಂತ ಈ ಮಾರ್ಗ ಉತ್ತಮ. 

ಆರು ಅಥವಾ ಕಡಿಮೆ ದಿನಕ್ಕೆ ಹೋಗುತ್ತಿದ್ದರೆ ಮಾತ್ರ ಅಷ್ಟೂ ದಿನಕ್ಕೆ ಪ್ರತ್ಯೇಕ ಬಟ್ಟೆ ತೆಗೆದುಕೊಂಡರೆ ಉತ್ತಮ.

ತೀರಾ ಮೌಲ್ಯದ ಆಭರಣ, ಲ್ಯಾಪ್ ಟಾಪ್ ಇತ್ಯಾದಿ ಬೇಡ. ಹುಂ ನೀವು ವ್ಲಾಗ್ಗರ್ ಆಗಿದ್ದು ಅಥವಾ ಅನಿವಾರ್ಯ ಇರುವಾಗ ಲ್ಯಾಪ್ ಟಾಪ್ ಒಕೆ. ಇಲ್ಲಾಂದ್ರೆ ಬೇಡ. ಸಾಧ್ಯವಾದ್ರೆ ಮೊಬೈಲ್ ಅಲ್ಲೇ ಮ್ಯಾನೇಜ್ ಮಾಡಿ.

ಪ್ರತಿ ಒಬ್ಬರಿಗೆ ಇಪ್ಪತ್ತು ಕೆಜಿ ವರೆಗೆ ಲಗ್ಗೇಜ್ ಚೆಕಿನ್ ಬ್ಯಾಗ್ ಅಲ್ಲಿ ಒಯ್ಯಬಹುದು. ಅದರ ಮಿತಿಯಲ್ಲೇ ಇರುವಂತೆ ನೋಡಿ ಕೊಂಡರೆ ಉತ್ತಮ. ಇಲ್ಲದಿದ್ದರೆ ಹೆಚ್ಚಿನ ಲಗ್ಗೇಜ್ ಗೆ ಹಣ ಜಾಸ್ತಿ ಕೊಡಬೇಕು.

ಸೂತ್ರ ೧.೯ : ಎಲ್ಲಾ ಟಿಕೆಟ್, ಪಾಸ್ ಪೋರ್ಟ್, ಹೋಟೆಲ್ ಬುಕಿಂಗ್, ವ್ಯಾಕ್ಸೀನ್ ಸರ್ಟಿಫಿಕೇಟ್ ಡಾಕ್ಯುಮೆಂಟ್ ಪ್ರಿಂಟ್ ಕಾಪಿ ಮೊದಲೆ ಮಾಡಿಸಿ

ನಿಜ ಎಲ್ಲಾ ಮುಖ್ಯ ಡಾಕ್ಯುಮೆಂಟ್ ನ ಮೂರು ಕಾಪಿ ಇದ್ದರೆ ಉತ್ತಮ. ಅವನ್ನು ಬೇರೆ ಬೇರೆ ಬ್ಯಾಗ್ ಅಲ್ಲಿ ಹಾಕಿಟ್ಟು ಕೊಂಡಿರಿ.

ಸೂತ್ರ ೧.೧೦ : ವೀಸಾ ಫೋಟೋ ಭಾರತದಲ್ಲೇ ಮಾಡಿಸಿ.

ನೀವು ವೀಸಾ ಆನ್ ಅರೈವಲ್ ಪ್ಲಾನ್ ಮಾಡುತ್ತಿದ್ದರೆ ಅದಕ್ಕೆ ಬೇಕಾದ ಫೋಟೋ ಮತ್ತು ಥಾಯಿ ಭಾಟ್ ಹಣದ ವ್ಯವಸ್ಥೆ ಇಲ್ಲೆ ಮಾಡಿಸಿ. ಅಲ್ಲಿ ಬ್ಯಾಕಾಂಕ್ ಅಲ್ಲಿ ಏರ್ ಪೋರ್ಟ್ ಅಲ್ಲಿ ಹಲವು ಪಟ್ಟು ಹಣ ನೀಡಿ ತೆಗೆದು ಕೊಳ್ಳಬೇಕು.

ಸೂತ್ರ ೧.೧೧ : ಫಾರೆಕ್ಸ್ ಕಾರ್ಡ್ ಹಾಗೂ ಹಣ ಇಲ್ಲೆ ಮಾಡಿಸಿ

ಎಷ್ಟು ಥಾಯಿ ಭಾಟ್ ಹಣ ಬೇಕೋ ಅದನ್ನು ಇರುವ ದೇಶದಲ್ಲೇ ಪಡೆದು ಕೊಂಡರೆ ಉತ್ತಮ. ಯಾಕೆ ಅಲ್ಲಿ ಏರ್ ಪೋರ್ಟ್ ಅಲ್ಲಿ ದರ ಜಾಸ್ತಿ. ಆಮೇಲೆ ಹೆಚ್ಚು ಹಣ ಬೇಕಾದರೆ ಬ್ಯಾಕಾಂಕ್ ಸಿಟಿ ಅಥವಾ ಬೇರೆ ಸಿಟಿಗಳಲ್ಲಿ ಕನ್ವರ್ಟ್ ಮಾಡಿಸಬಹುದು. ಅದಕ್ಕೆ ನಿಮ್ಮ ಬಳಿ ಅಂತರಾಷ್ಟ್ರೀಯ ಟ್ರಾನ್ಸಾಕ್ಷನ್ ಇರೋ ವೀಸಾ/ಮಾಸ್ಟರ್ ಕಾರ್ಡ್ ಇರಬೇಕು.

ಸೂತ್ರ ೧.೧೨ : ಸಿಮ್ ಕಾರ್ಡ್ ಭಾರತದಲ್ಲೇ ತೆಗೆದುಕೊಌ.

ಮೆಟ್ರಿಕ್ಸ್ ಸಿಮ್ ಕಾರ್ಡ್ ಥಾಯ್ ಲ್ಯಾಂಡಿಗೆ ಭಾರತದಲ್ಲೇ ಕೊಂಡರೆ ಉತ್ತಮ. ಏರ್ ಟೆಲ್ / ಜಿಯೋ ರೋಮಿಂಗ್ ಸಹ ಸಾಧ್ಯವಿದೆ. ಆದರೆ ಅವು ದುಬಾರಿ ಬೆಲೆ. ನಿಮ್ಮ ಈಗಿರುವ ನಂಬರ್ ವರ್ಕ್ ಆಗಬೇಕು ಎಂದರೆ ಮಾತ್ರ ಹಾಗೆ ರೋಮಿಂಗ್ ಎನೆಬಲ್ ಮಾಡಿಸಿ. ಇಲ್ಲಾಂದ್ರೆ ಮೆಟ್ರಿಕ್ಸ್ ಸಿಮ್ ಕಾರ್ಡ್ ಉತ್ತಮ.

ಸೂತ್ರ ೧.೧೩ : ಕೊವಿಡ್ ಟೆಸ್ಟಿಂಗ್ ಮೊದಲೇ ಮಾಡಿಸಿ

ಭಾರತಕ್ಕೆ ವಾಪಸ್ ಬರುವಾಗ ೫ ವರ್ಷಕ್ಕಿಂತ ದೊಡ್ಡ ಮಕ್ಕಳು ಹಾಗೂ ದೊಡ್ಡವರು ವ್ಯಾಕ್ಸೀನ್ ಆಗಿರದಿದ್ದರೆ ಆರ್ ಟಿ ಪಿ ಸಿ ಆರ್ ಕೊವಿಡ್ ಟೆಸ್ಟಿಂಗ್ ಮಾಡಿಸಬೇಕು. ಇದನ್ನು ಮೊದಲೇ ಹೊರಗಡೆ ಥೈಲ್ಯಾಂಡ್ ಅಲ್ಲಿ ಮಾಡಿಸಿ. ಏರ್ ಪೋರ್ಟ್ ಅಲ್ಲಿ ಇದಕ್ಕೆ ೩೦೦೦ ಭಾಟ್ ಒಬ್ಬರಿಗೆ ಖರ್ಚಾಗುತ್ತದೆ. ವ್ಯಾಕ್ಸೀನ್ ಆದವರಿಗೆ ಬರಿ ವ್ಯಾಕ್ಸೀನ್ ಸರ್ಟಿಫಿಕೇಟ್ ಇದ್ದರೆ ಸಾಕು.

೨. ಥಾಯ್ಲೆಂಡ್ ಅಲ್ಲಿ ಓಡಾಟಕ್ಕೆ

ಸೂತ್ರ ೨.೧ : ಸಾಧ್ಯವಿದ್ದ ಕಡೆ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬಳಸಿ

ಕೆಲವೊಮ್ಮೆ ಹತ್ತಿರದ ಜಾಗಕ್ಕೆ ಹೋಗಲು ಮೆಟ್ರೋ, ಬಸ್ ಸೇವೆ ಬ್ಯಾಂಕಾಕ್ ನಂತಹ ಸಿಟಿಯಲ್ಲಿ ಲಭ್ಯ ಇರುತ್ತದೆ. ಅದನ್ನು ಬಳಸಿ. ಗೂಗಲ್ ಮ್ಯಾಪ್ ಅಲ್ಲಿ ಹೋಗ ಬೇಕಾದ ಜಾಗ ಸರ್ಚ್ ಮಾಡಿ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಆಯ್ಕೆ ಮಾಡಿ. ಅದು ನಿಮಗೆ ಹಲವು ಆಯ್ಕೆ ನೀಡುತ್ತದೆ. ಯಾವ ಬಸ್ / ಮೆಟ್ರೋ ಎಲ್ಲಿ ಹತ್ತ ಬೇಕು ಎನ್ನುವ ಮಾಹಿತಿ ಸಹ ನೀಡುತ್ತದೆ.

ಹುಂ ಈ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಒಂದು ಅನನುಕೂಲ ಎಂದರೆ ನೀವು ಕೆಲವೊಮ್ಮೆ ಅರ್ಧ ಕಿಮಿನಿಂದ ೧ ಕಿಮೀ ಆದರೂ ನಡೆಯ ಬೇಕು.

ತೀರಾ ವಯಸ್ಕರು ಅಥವಾ ಚಿಕ್ಕ ಮಕ್ಕಳಿದ್ದರೆ ನಡೆಯ ಬೇಕಾದ ದೂರ ಜಾಸ್ತಿ ಇದ್ದರೆ ಟುಕ್ ಟುಕ್ ಆಟೋ ಸಹಾಯ ಪಡೆದು ಕೊಂಡರೆ ಉತ್ತಮ.

ಸೂತ್ರ ೨.೨ : ಕೇವಲ ಮೀಟರ್ ಇರೋ ಟ್ಯಾಕ್ಸಿ ಬಳಸಿ

ಮೀಟರ್ ಇಲ್ಲದ ಟ್ಯಾಕ್ಸಿ ಬಳಸ ಬೇಡಿ. ಇದರಿಂದ ನೀವು ಅನಗತ್ಯವಾಗಿ ಮೋಸ ಹೋಗುವದು ತಪ್ಪುತ್ತೆ.

ಸೂತ್ರ ೨.೩ : ಟುಕ್ ಟುಕ್ ಗಾಡಿ ಚೌಕಾಶಿ ಮಾಡದೇ ಹತ್ತ ಬೇಡಿ

ಟುಕ್ ಟುಕ್ ಗಾಡಿ ಹತ್ತುವ ಮುನ್ನ ಚೌಕಾಶಿ ಮಾಡಿ ಎಷ್ಟು ಹಣ ಎಂಬುದನ್ನು ಖಚಿತ ಪಡಿಸಿಕೊಂಡು ಹತ್ತಿ. ಸಾಮಾನ್ಯವಾಗಿ ೩೦ ರಿಂದ ೬೦ ಭಾಟ್ ಒಂದು ಕಿಮೀ ಗೆ ಚಾರ್ಜ್ ಮಾಡುತ್ತಾರೆ. ಟುಕ್ ಟುಕ್ ಅನ್ನು ತೀರಾ ಅನಿವಾರ್ಯ ಆದ ಹೊರತು ಬಳಸ ಬೇಡಿ.

ಸೂತ್ರ ೨.೪ : ಓಡಾಡಲು ಟ್ಯಾಕ್ಸಿಗಳನ್ನು ಅಡ್ವಾನ್ಸ್ ಬುಕಿಂಗ್ ಮಾಡಿ

ಮೊದಲೇ ಏರ್ ಪೋರ್ಟ್ ನಿಂದ ಹೋಟೆಲ್ ಗೆ, ಹಾಗೇ ಹೋಟೆಲ್ ನಿಂದ ಏರ್ ಪೋರ್ಟ್ ಗೆ, ಓಡಾಡಲು ಟ್ಯಾಕ್ಸಿ ಆನ್ ಲೈನ್ ಅಲ್ಲಿ ಮುಂಚಿತವಾಗಿ ಬುಕಿಂಗ್ ಮಾಡಿ. ಕೊನೇ ಕ್ಷಣದಲ್ಲಿ ಬುಕಿಂಗ್ ಮಾಡಿದರೆ ಬೆಲೆ ಜಾಸ್ತಿ.

ಸೂತ್ರ ೨.೫ : ಶೇರ್ಡ್ ಅಥವಾ ಬೈಕ್ ಟ್ಯಾಕ್ಸಿ ಬಳಸಿ


ನೀವು ಒಬ್ಬರೇ ಇದ್ದರೆ ಶೇರ್ಡ್ ಟ್ಯಾಕ್ಸಿ ಅಥವಾ ಬೈಕ್ ಟ್ಯಾಕ್ಸಿ ಬಳಸಿ. ಇದರಿಂದ ಕಡಿಮೆ ದರದಲ್ಲಿ ಪ್ರಯಾಣ ಮಾಡಬಹುದು.

ಥೈಲಾಂಡ್ ನ ಹಲವು ಕಡೆ ಈ ಶೇರ್ಡ್ ಟ್ಯಾಕ್ಸಿ ಸೌಲಭ್ಯ ಇದೆ. ನಿಗದಿತ ಜಾಗದಲ್ಲಿ ಹತ್ತಿ ಇಳಿಯಬಹುದು.

೩. ಥಾಯ್ಲೆಂಡ್ ಅಲ್ಲಿ ಹೋಟೆಲ್

ಸೂತ್ರ ೩.೧: ಹೋಟೆಲ್ ರೂಂ ಸರ್ವೀಸ್ ಅನಗತ್ಯವಾಗಿ ಬಳಸ ಬೇಡಿ

ಹೋಟೆಲ್ ಅಲ್ಲಿ ಪ್ರಿಜ್ ಅಲ್ಲಿ ಇಟ್ಟಿರೋ ಪಾನೀಯ್, ಚಿಪ್ಸ್ ಎಷ್ಟು ಎಂದು ನೋಡದೇ ಮುಟ್ಟಬೇಡಿ. ಅವಕ್ಕೆ ದುಪ್ಪಟ್ಟು ಹಣ ಇರುವ ಸಾಧ್ಯತೆ ಇದೆ. ರೂಂ ಗೆ ಊಟ ತರಿಸಿಕೊಳ್ಳುವದು, ಟೀ ತರಿಸುವದು ಮಾಡದಿರಿ. ಯಾವುದು ಕಾಂಪ್ಲಿಮೆಂಟರಿ ಯಾವುದು ಅಲ್ಲ ತಿಳಕೊಂಡು ಬಳಸಿ. 

ಅನೇಕ ಕಡೆ ಉಚಿತವಾಗಿ ಟೀ/ಕಾಫಿ, ನೀರು ಇರುತ್ತೆ, ನೀವು ಅವನ್ನು ಉಚಿತವಾಗಿ ಬಳಸಬಹುದು. ಉಚಿತ ಇದ್ರೆ ಖಂಡಿತ ಬಿಡಬೇಡಿ!

ರೂಂ ಸರ್ವೀಸ್ ಅಗತ್ಯ ಇದ್ದಲ್ಲಿ ಮಾತ್ರ ಬಳಸಿ.

ಸೂತ್ರ ೩.೨: ಬಟ್ಟೆ ತೊಳೆಯಲು ಸೆಲ್ಫ್ ಸರ್ವೀಸ್ ಲಾಂಡ್ರಿ ಬಳಸಿ

ನೀವು ಹೋಟೆಲ್ ಲಾಂಡ್ರಿ ಗೆ ಕೊಟ್ಟು ತೊಳೆಸಿದರೆ ಖರ್ಚು ಜಾಸ್ತಿ. ಕೆಲವೊಮ್ಮೆ ಒಂದು ಬಟ್ಟೆ ತೊಳೆಯುವ ದರದಲ್ಲಿ ಅದೇ ಹೊಸ ಬಟ್ಟೆ ಭಾರತದಲ್ಲಿ ತೆಗೆದುಕೊಳ್ಳಬಹುದು! ದಯಮಾಡಿ ಹೋಟೆಲ್ ಲಾಂಡ್ರಿ ಉಪಯೋಗಿಸುವ ಮುನ್ನ ಹೊರಗಡೆ ಬೇರೆ ಆಯ್ಕೆ ಇದೆಯಾ ನೋಡಿ. ಅವು ಕಡಿಮೆ ದರದಲ್ಲಿ ಬಟ್ಟೆ ತೊಳೆದು ಕೊಡುತ್ತವೆ.

ಗೂಗಲ್ ಮ್ಯಾಪ್ ಅಲ್ಲಿ ಲಾಂಡ್ರಿ ಅಂತ ಸರ್ಚ್ ಮಾಡಿದರೆ ಹತ್ತಿರದಲ್ಲಿರುವ ಸೆಲ್ಫ್ ಸರ್ವೀಸ್ ಲಾಂಡ್ರಿ ಸೇವೆಯ ಬಗ್ಗೆ ತಿಳಿಯುತ್ತೆ. ಅಲ್ಲಿ ಹತ್ತು ಕೆಜಿಯವರೆಗೆ ಬಟ್ಟೆಯನ್ನು ನೀವೆ ವಾಶಿಂಗ್ ಮಾಡಿ ಒಣಗಿಸಿಕೊಂಡು ಒಂದುವರೆ ತಾಸಲ್ಲಿ ಬರಬಹುದು. 

ಹತ್ತು ಕೆಜಿಗೆ ಬ್ಯಾಂಕಾಕ್ ಅಲ್ಲಿ ೧೩೦ ಭಾಟ್ (ಸೋಪ್ / ಸಾಫ್ಟನರ್ / ವಾಶ್ / ಡ್ರೈ) ಎಲ್ಲ ಸೇರಿ ಪಟ್ಟಾಯಾ ದಲ್ಲಿ ಅದಕ್ಕೆ ೯೦ ಭಾಟ್ ಆಗುತ್ತೆ.

ಎರಡನೆಯ ಬೆಸ್ಟ್ ಆಯ್ಕೆ ೧ ಕೆಜಿಗೆ ೧೦೦ ಭಾಟ್ ನಂತೆ ಡ್ರೈ ಕ್ಲೀನ್ ಮಾಡಿಸುವದು. ಇದು ಜಾಸ್ತಿ ನಿಜ. ಆದರೆ ಹೋಟೆಲ್ ಅಲ್ಲಿ ಒಂದು ಬಟ್ಟೆಗೆ ೫೦ ರಿಂದ ೧೦೦ ಭಾಟ್ ಆಗುತ್ತೆ. ಅದಕ್ಕೆ ಹೋಲಿಸಿದರೆ ಕಡಿಮೆ.

ಇದ್ಯಾವುದು ಬೇಡ ಎಂದರೆ ಬಾತ್ ರೂಂ ಟಬ್ ಅಲ್ಲಿ ತೊಳೆದು ಒಣಗಿಸುವದು. ಆದರೆ ಬಟ್ಟೆ ಒಣಗದೇ ಮುಗ್ಗಲು ವಾಸನೆ ಆದ್ರೆ ಕಷ್ಟ! ಎಲ್ಲೆಂದರಲ್ಲಿ ಒಣಗಿಸಿದರೆ ಹೋಟೆಲ್ ನಿಮಗೆ ಡ್ಯಾಮೇಜ್ ಆಗಿದೆ ಎಂದು ಚಾರ್ಜ್ ಮಾಡುವ ಸಾಧ್ಯತೆ ಇದೆ.

ಸೂತ್ರ ೩.೩ : ಬೆಳಿಗ್ಗೆ ಕಾಂಪ್ಲಿಮೆಂಟರಿ ಬ್ರೆಕ್ ಫಾಸ್ಟ್ ಇದ್ದರೆ ತಪ್ಪಿಸ ಬೇಡಿ

ಹೆಚ್ಚಿನ ಸ್ಟಾರ್ ಹೋಟೆಲ್ ಗಳಲ್ಲಿ ಬೆಳಿಗ್ಗೆ ತಿಂಡಿ ಉಚಿತ ವಾಗಿ ಕೊಡುತ್ತಾರೆ. ತಪ್ಪಿಸ ಬೇಡಿ. ಸಸ್ಯಾಹಾರಿಗಳಿಗೆ ಬ್ರೆಡ್ ಜ್ಯಾಮ್, ಹಣ್ಣು, ಜ್ಯೂಸಲ್ಲೇ ಹೊಟ್ಟೆ ತುಂಬಿಕೊಳ್ಳಬೇಕು. ಮಾಂಸಾಹಾರಿಗಳಿಗೆ ಮೀನು, ಮೊಟ್ಟೆ, ಚಿಕನ್ ಸಿಕ್ಕೀತು. ಬಾಯಿಗೆ ಹಾಕುವ ಮುನ್ನ ಅದರಲ್ಲಿ ಏನಿದೆ ಅನ್ನುವದನ್ನು ಖಚಿತ ಪಡಿಸಿಕೊಂಡು ಮೇಯಿರಿ!

ಸೂತ್ರ ೩.೪ : ಸರಿಯಾದ ಸಮಯಕ್ಕೆ ಚೆಕ್ ಔಟ್ ಮಾಡಿ

ನೀವು ಚೆಕೌಟ್  ಮಾಡುವ ಸಮಯಕ್ಕೆ ಅರ್ಧ ಗಂಟೆ ಮುಂಚೆ ಚೆಕೌಟ್ ಮಾಡಿ. ಅಕಸ್ಮಾತ್ ನಿಮಗೆ ಏರ್ ಪೋರ್ಟ್ ಪಿಕಪ್ ಅಥವಾ ಮುಂದಿನ ಪಯಣದ ಪಿಕಪ್ ಗೆ ತುಂಬಾ ಸಮಯ ಇದ್ದರೆ ಹೋಟೆಲ್ ರಿಸಿಪ್ಶನ್ ಲಾಬಿಯಲ್ಲೇ ಬ್ಯಾಗ್ ಇಡಲು ಅನುಕೂಲ ಮಾಡಿ ಕೊಡುತ್ತಾರೆ. ಹಾಗೆ ಮಾಡಿ. 

ಲಗ್ಗೇಜ್ ಅನ್ನು ಎಲ್ಲ ಕಡೆ ಬೇರೆ ಬೇರೆ ಗಾಡಿಯಲ್ಲಿ ಹಾಕಿ ಕೊಂಡು ತಿರುಗುವದಕ್ಕಿಂತ ಅದು ಉತ್ತಮ. ಅದೇ ಗಾಡಿ ನಿಮ್ಮನ್ನು ದಿನದ ಪ್ರಯಾಣದ ನಂತರ ಏರ್ ಪೋರ್ಟ್ ಗೆ ಡ್ರಾಪ್ ಮಾಡುವ ಹಾಗಿದ್ದರೆ ಪರವಾಗಿಲ್ಲ.

೪. ಥಾಯ್ಲೆಂಡ್ ಅಲ್ಲಿ ಊಟ ತಿಂಡಿ

ಬೆಳಿಗ್ಗೆ ತಿಂಡಿ ಹೋಟೆಲ್ ಅಲ್ಲಿ ಉಚಿತ ಆಗಿದ್ರೆ ಮಿಸ್ ಮಾಡ ಬೇಡಿ.

ಸೂತ್ರ ೪.೧ : ಹತ್ತಿರದ ಸೂಪರ್ ಮಾರ್ಕೆಟ್ ಭೇಟಿ ನೀಡಿ

ಸೂಪರ್ ಮಾರ್ಕೆಟ್ ಗೆ ಭೇಟಿ ಕೊಡಿ. ಥಾಯ್ಲೆಂಡ್ ಮೂಲೆ ಮೂಲೆಯಲ್ಲಿ 7 | Eleven (ಸೆವೆನ್ । ಎಲೆವೆನ್) ಎಂಬ ಸೂಪರ್ ಮಾರ್ಕೆಟ್ ಇದೆ. ಅಲ್ಲಿ ನಿಮಗೆ ಯೋಗರ್ಟ್, ಬ್ರೆಡ್, ಬೇಯಿಸಿ ತಣಿಸಿದ ಅನ್ನ, ಪಾನೀಯ, ನೀರು ಎಲ್ಲ ಸಿಗುತ್ತೆ. ಬೆಲೆ ಕೂಡಾ ಕಮ್ಮಿ.

ಸೂತ್ರ ೪.೨: ಸಾಧ್ಯವಿದ್ದಷ್ಟು ಕಡಿಮೆ ಇಂಡಿಯನ್ ಫುಡ್ ತಿನ್ನಿ

ಬೇರೆ ದೇಶಕ್ಕೆ ಹೋದಾಗ ನಮ್ಮೊಳಗಿನ ಭಾರತೀಯ ಜಾಗೃತ ನಾಗಿ ದೋಸೆ, ಇಡ್ಲಿ, ಉಪ್ಪಿಟ್ಟು, ಚಪಾತಿ ಗಾಗಿ ನಾಲಿಗೆ ಹಪ ಹಪಿಸುತ್ತೆ. ಕಮಾನ್ ನಮ್ಮ ಗುರಿ ಪ್ರವಾಸ ಹೊರತು ಇಡ್ಲಿ, ದೋಸೆ ತಿನ್ನುವದು ಅಲ್ಲ! ಸಾಧ್ಯವಾದಷ್ಟು ಥಾಯಿ ಡಿಶ್, ಬ್ರೆಡ್ ಸಾಸ್ ನಲ್ಲಿ ಮ್ಯಾನೆಜ್ ಮಾಡಿ. ಒಮ್ಮೊಮ್ಮೆ ಇಂಡಿಯನ್ ರೆಸ್ಟಾರೆಂಟ್ ಹೋಗಿ. ಆಗ ಉಳಿತಾಯ ಖಚಿತ.

ಒಂದು ವಿಷಯ ನೆನಪಿಡಿ ಥಾಯ್ಲೆಂಡನ ಬ್ಯಾಂಕಾಕ್ ನಲ್ಲಿ ಬರೀ ಒಂದು ಮಸಾಲೆ ದೋಸೆಗೆ ಸುಮಾರು ೩೫೦ರೂ (೧೫೦ ಭಾಟ್) ಆಗುತ್ತದೆ.

ಸೂತ್ರ ೪.೩: ನೀರನ್ನು ಸಾಧ್ಯವಿದ್ದ ಕಡೆ ರಿಫಿಲ್ ಮಾಡಿ ಹಾಗೂ ಸೂಪರ್ ಮಾರ್ಕೆಟ್ ಅಲ್ಲಿ ಖರೀದಿಸಿ

ಹೋಟೆಲ್ ಅಲ್ಲಿ ಉಚಿತವಾಗಿ ಸಿಗುವ ನೀರನ್ನು ಕುಡಿಯಿರಿ. ಆದರೆ ಹೋಟೆಲ್ ಅಲ್ಲಿ ಒಬ್ಬರಿಗೆ ದಿನಕ್ಕೆ ಅರ್ಧ ಲೀಟರ್ ನೀರು ಮಾತ್ರ ಕೊಡುತ್ತಾರೆ. ಸಾಕಾಗಲ್ಲ. ಸಾಧ್ಯವಿರುವ ಕಡೆ ಬಾಟಲ್ ರಿಫಿಲ್ ಮಾಡಿ ಕುಡಿಯಿರಿ. ಸೂಪರ್ ಮಾರ್ಕೆಟ್ ೭ । Eleven ಅಲ್ಲಿ ನಿಮಗೆ ಕಡಿಮೆ ಬೆಲೆಗೆ ನೀರು ಸಿಗುತ್ತೆ. ಅಲ್ಲಿ ೫ ಲೀಟರ್ ನ ಕ್ಯಾನ್ ಖರೀದಿಸಿ. ಆಮೇಲೆ ಚಿಕ್ಕ ಬಾಟಲ್ ಗೆ ರಿಫಿಲ್ ಮಾಡಿಕೊಳ್ಳುತ್ತಾ ಇರಿ. ಬೇಕಿದ್ರೆ ೧ ಲೀ ಬಾಟಲ್ ಕೂಡಾ ಖರೀದಿಸಿ ಪರವಾಗಿಲ್ಲ. ಆದರೆ ಬೇರೆ ಕಡೆ ಹೊರಗೆ ನೀರಿನ ಖರೀದಿ ಕಡಿಮೆ ಮಾಡಿ. 

೫. ಥಾಯ್ಲೆಂಡ್ ಅಲ್ಲಿ ಶಾಪಿಂಗ್

ಸೂತ್ರ ೫.೧: ಸಾಧ್ಯವಿದ್ದಷ್ಟು ಖರೀದಿ ಮಾಡುವಾಗ ಎರಡು ಅಂಗಡಿ ಹೋಲಿಕೆ ಮಾಡಿ

ಸಾಮಾನ್ಯ ವಾಗಿ ತೀರಾ ಆಡಂಭರ ಇರುವ ಅಂಗಡಿಗಳಲ್ಲಿ ಬೆಲೆ ಜಾಸ್ತಿ. ಸಾಧಾರಣ ಅಂಗಡಿಗಳಲ್ಲಿ ಬೆಲೆ ಕಡಿಮೆ. ರಸ್ತೆ ಪಕ್ಕದಲ್ಲೂ ಬೆಲೆ ಕಡಿಮೆ ಇರುತ್ತೆ. ನೋಡಿ ಖರೀದಿಸಿ.

ಖರೀದಿ ಮಾಡುವದಕ್ಕೆ ಮುನ್ನ ಎರಡು ಅಂಗಡಿ ಕೇಳಿ ನಂತರ ನಿರ್ಧರಿಸಿ. ಚೌಕಾಶಿ ಮಾಡಲು ಮರೆಯದಿರಿ. 

ಸೂತ್ರ ೫.೨ : ಪದೇ ಪದೇ ಏಟಿಎಂ ಗೆ ಹೋಗಬೇಡಿ

ಪ್ರತಿ ಬಾರಿ ಏಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ ವಿನಿಮಯ ದರದ ಜೊತೆಗೆ ಹಣ ತೆಗೆದಕ್ಕೆ ಚಾರ್ಜ್  ಆಗುತ್ತೆ. ಚಿಕ್ಕ ಚಿಕ್ಕ ಎಮೌಂಟ್ ತೆಗೆಯುವ ಬದಲು ಒಮ್ಮೆಲೆ ಬೇಕಾದಷ್ಟು ಹಣ ತೆಗೆಯುವದು ವಾಸಿ. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನ್ನು ಶಾಪಿಂಗ್ ಮಾಡುವಾಗ ಬಳಸ ಬೇಡಿ. ಒಂದೇ ಕ್ಯಾಶ್ ಅಥವಾ ಫಾರೆಕ್ಸ್ ಕಾರ್ಡ್ ಅನ್ನು ಬಳಸಿ.

ಸೂತ್ರ ೫.೩ :  ವಸ್ತುಗಳನ್ನು ಬೇಕಾ ಬಿಟ್ಟಿ ಖರೀದಿ ಮಾಡಬೇಡಿ

ನಿಮ್ಮ ಮುಖ್ಯ ಗುರಿ ಥಾಯ್ಲೆಂಡಿನ ಜಾಗ, ಅಲ್ಲಿನ ಸಂಸ್ಕೃತಿ ನೋಡುವದು ಆಗಿರಬೇಕೆ ಹೊರತು ಕಂಡ ಕಂಡದ್ದನ್ನು ಖರೀದಿ ಮಾಡುವದಲ್ಲ. ಒಂದೆರಡು ಸ್ಮರಣಿಕೆ, ಟೀಶರ್ಟ್ ಒಕೆ. ಆದರೆ ಏನೂ ಕಾಣದವರಂತೆ ಶಾಪಿಂಗ್ ಮಾಡುವದು ಒಳ್ಳೆಯದಲ್ಲ. ಭಾರತದಲ್ಲಿ ಅದಕ್ಕಿಂತ ಕಡಿಮೆ ಹಣಕ್ಕೆ ನಿಮಗೆ ವಸ್ತುಗಳು ಸಿಗುತ್ತವೆ.

೬. ಥಾಯ್ಲೆಂಡ್ ಅಲ್ಲಿ ಉಳಿತಾಯ

೬.೧ ಉಚಿತ ವೈಫೈ ಬಳಸಿ

ಏರ್ ಪೋರ್ಟ್ ಅಲ್ಲಿ ಹಾಗೂ ಹೋಟೆಲ್ ಗಳಲ್ಲಿ ಉಚಿತ ವೈ ಫೈ ಇರುತ್ತೆ. ಅದನ್ನು ಬಳಸಿ. ನಿಮ್ಮ ಸಿಮ್ ಕಾರ್ಡ್ ಡಾಟಾ ಅನ್ನು ಹೊರಗಡೆ ಇದ್ದಾಗ ಮಾತ್ರ ಬಳಸಿ.

೬.೨ ಸಿಟಿಯಿಂದ ದೂರ ಇರುವ ಅಂಗಡಿ

ಸಿಟಿಯಿಂದ ಸ್ವಲ್ಪ ದೂರ ಇರುವ ಅಂಗಡಿಗಳಲ್ಲಿ, ಮೇನ್ ರೋಡ್ ನಿಂದ ಒಳಗಿರುವ ರೋಡಲ್ಲಿ ದರ ಕಡಿಮೆ. ತಳ್ಳುವ ಗಾಡಿಯಲ್ಲಿ ಕೂಡಾ ದರ ಕಡಿಮೆ. ಟ್ರೈ ಮಾಡಲು ಹಿಂಜರಿಯ ಬೇಡಿ.

೬.೩ ಆರೋಗ್ಯ ಕಾಪಾಡಿ ಕೊಂಡಿರಿ

ವಿದೇಶದಲ್ಲಿ ಆಸ್ಪತ್ರೆ ಖರ್ಚು ಜಾಸ್ತಿ. ಥಾಯ್ಲೆಂಡ್ ಏನು ಬೇರೆ ಅಲ್ಲ. ಅಲ್ಲಿಯೂ ಹಾಸ್ಪಿಟಲ್ ಗಳು ಅದರಲ್ಲೂ ಅಂತರಾಷ್ಟ್ರೀಯ ಆಸ್ಪತ್ರೆಗಳು ಸರಿಯಾಗಿ ಚಾರ್ಜ್ ಮಾಡುತ್ತವೆ.

ಕಾಲ ಕಾಲಕ್ಕೆ ನಿದ್ದೆ, ನೀರು, ಆಹಾರ ಏರು ಪೇರಾಗದಂತೆ ಎಚ್ಚರ ವಹಿಸಿ. ಆರೋಗ್ಯ ಕೆಡದಂತೆ ಕಾಳಜಿ ವಹಿಸಿದರೆ ಅನವಶ್ಯಕ ಖರ್ಚಾಗದಂತೆ ತಡೆಯಬಹುದು.

೬.೪ ಸಾಹಸ ಕ್ರೀಡೆ ಆಡುವಾಗ ಅದರ ರಿಸ್ಕ್ ಅನ್ನು ಗಮನದಲ್ಲಿಡಿ


ಯಾರು ಏನೇ ಹೇಳಲಿ ಸಾಹಸ ಕ್ರೀಡೆಗಳಲ್ಲಿ ರಿಸ್ಕ್ ಇದ್ದೇ ಇರುತ್ತೆ. ನಿಮ್ಮ ಬಳಿ ಆಗದು ಎನ್ನಿಸಿದರೆ ಆಡಬೇಡಿ.

೬.೫ ಗೊತ್ತಿಲ್ಲದ ಕಡೆ ಹೋಗಿ ಸ್ಕ್ಯಾಮ್  ಬಲೆಯಲ್ಲಿ ಬೀಳದಿರಿ

ತುಂಬಾ ಹಣ ಉಳಿಸಲು ಹೋಗಿ ಯಾರೋ ಭಾರಿ ಡಿಸ್ಕೌಂಟ್ ಕೊಡುತ್ತಾನೆಂದು ಮೋಸಗಾರರ ಬಲೆಗೆ ಬೀಳದಿರಿ. ನಂಬಲಸಾಧ್ಯವಾದ ಡೀಲ್ ಇದ್ದರೆ ಮೋಸ ಇರಬಹುದಾ ಎಂಬ ಎಚ್ಚರಿಕೆಯಿಂದ ನಿರ್ವಹಿಸಿ.

ಕೊನೆಯ ಮಾತು

ಥಾಯ್ಲೆಂಡ್ ನಲ್ಲಿ ಈ ಮೇಲೆ ತಿಳಿಸಿದ ಕೆಲವೇ ಕೆಲವು ಟಿಪ್ಸ್ ಅನ್ನು ನೀವು ಅನುಸರಿಸಿದರೂ ಹಣ ಉಳಿಸಬಹುದು. ಮೊದಲೇ ವಿದೇಶ ಪ್ರವಾಸ ಹಣ ಖರ್ಚು ಜಾಸ್ತಿ. ಯಾವುದೇ ಚಿಂತೆ ಮಾಡದೇ ಹಣ ವ್ಯಯಿಸಿದರೆ ಆಮೇಲೆ ಪಶ್ಚಾತ್ತಾಪ ಗ್ಯಾರಂಟಿ.

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಮಾತಿನ ಪ್ರಕಾರ ನಡೆದು ಜಾಣ್ಮೆ ತೋರಿದರೆ ನಿಮ್ಮ ಪ್ರವಾಸ ಆರ್ಥಿಕ ಹೊರೆ ಆಗದು. ನೀವು ಇನ್ಯಾವ ಟಿಪ್ಸ್ ನೀಡಬಯಸ್ತೀರಾ? ಕಮೆಂಟ್ ಹಾಕಿ.

ಅ ಅ ಅನ್ನ...

ನನ್ನ ಎರಡನೆಯ ಮಗನಿಗೆ ಕನ್ನಡ ಸ್ವರ ಪರಿಚಯ ಮಾಡಲು ನಾನು ಕಟ್ಟಿದ ಹಾಡು.  ಚಿಕ್ಕವನಿದ್ದಾಗ ಈ ಹಾಡನ್ನು ಖುಷಿಯಿಂದ ಹಾಡುತ್ತಿದ್ದ. ಇಲ್ಲಿ ಹಾಗೆ ಸುಮ್ಮನೆ!

ಅ ಅನ್ನ... ಸಾಂಬಾರ್ ಬೇಕೆ ಇನ್ನ

ಆ ಆನೆ... ಕೊಡ್ಲಾ ಬಾಳೆ ಕೊನೆ

ಇ ಇರುವೆ... ಸಕ್ಕರೆ ಬೆಲ್ಲ ಕೊಡುವೆ

ಈ ಈಶ... ನಮಿಸುವೆನು ದಿವಸ


ಉ ಉರಗ... ಕಚ್ಚ ಬೇಡ್ವೋ ನನಗ

ಊ ಊಟ... ಆದ ಮೇಲೆ ಪಾಠ

ಋ ಋಷಿ... ತಪಸ್ಸಿನಲ್ಲೇ ಖುಷಿ


ಎ ಎಮ್ಮೆ... ಕೊಡುವೆಯಾ ಹಾಲು ಒಮ್ಮೆ

ಏ ಏಣಿ... ಹತ್ತಲಾ ನಿನ್ನ ಏಣಿ

ಐ ಐದು... ಕೈಲಿ ಬೆರಳು ಐದು


ಒ ಒಂಟೆ... ನಿನಗೂ ಬಾಯಾರಿಕೆ ಉಂಟೆ?

ಓ ಓದು... ಪುಸ್ತಕಾನಾ ಓದು

ಔ ಔಷದಿ... ಜ್ವರ ಬಂದಾಗ ಬೇಕ್ರಿ


ಅಂ ಅಂ ಅಂಗಡಿ... ಚಾಕ್ಲೇಟ್ ತಂದು ತಿಂತೀನಿ

ಅಃ ಅಃ ಅಃ... ನಿಂಗೂ ಬೇಕಾ ಚಹಾ!

ಶಿವಗಂಗೆ ಬೆಟ್ಟ : ಐತಿಹಾಸಿಕ ಟ್ರೆಕ್ಕಿಂಗ್ ದೇವಸ್ಥಾನ

 ಬೆಂಗಳೂರಿನ ಆಜೂ ಬಾಜುನಲ್ಲಿ ಒಂದು ದಿನದಲ್ಲಿ ಹೋಗಿ ಬರಬಹುದಾದ ಶಿವನ ದೇವಸ್ಥಾನ ಹಾಗೂ ಟ್ರೆಕ್ಕಿಂಗ್ ಗೆ ಸೂಕ್ತ ಜಾಗ ಹುಡುಕುತ್ತಾ ಇದ್ದೀರಾ?

ಬೆಂಗಳೂರಿನ ನೆಲಮಂಗಲ ತಾಲ್ಲೂಕಿನಲ್ಲಿರುವ ಎರಡು ಶಿವನ ದೇವಸ್ಥಾನ, ಹಲವು ಪವಿತ್ರ ತೀರ್ಥ, ಶಾರದಾ ದೇವಸ್ಥಾನ, ಶೃಂಗೇರಿ ಮಠ, ಉತ್ತಮ ಟ್ರೆಕ್ಕಿಂಗ್ ಜಾಗ, ಸುಂದರ ಪರಿಸರ ಎಲ್ಲಾ ಇರುವ ಶಿವಗಂಗೆ ಬೆಟ್ಟದ ಬಗ್ಗೆ ನಿಮಗೆ ಗೊತ್ತೆ?

ಬನ್ನಿ ಶಿವಗಂಗೆ ಬೆಟ್ಟ ಬಗ್ಗೆ ಅಲ್ಲಿ ಹೋಗುವದು ಹೇಗೆ, ಪ್ರವಾಸಿ ಟಿಪ್ಸ್ ಗಳನ್ನು ಇಲ್ಲಿ ನೋಡೋಣ.

ಶಿವಗಂಗೆ ಬೆಟ್ಟ ಎಲ್ಲಿದೆ?


ಬೆಂಗಳೂರಿನ ತುಮಕೂರು ರಸ್ತೆ(ಎನ್ ಎಚ್-೪೮) ಯಲ್ಲಿ ಸಾಗಿ ನೆಲಮಂಗಲ ದಾಟಿ ಅಲ್ಲಿಂದ ೧೫ ಕಿಮಿ ಮುಂದೆ ಕೆರೆಕತ್ತಿಗನೂರಿನ ಕಡೆ ತಿರುಗಬೇಕು. ಅಲ್ಲೇ ಮುಂದೆ ಸುಮಾರು ೧೧ಕಿಮಿ ದೂರ ಸಾಗಿದರೆ ಶಿವಗಂಗೆ ಬೆಟ್ಟದ ಬುಡ ಸಿಗುತ್ತದೆ. ಸುಮಾರು ಬೆಂಗಳೂರಿನಿಂದ ೫೪ಕಿಮಿ ದೂರ ಇದೆ.

ಅದೇ ರೀತಿ ತುಮಕೂರಿನಿಂದ ದಾಬಸ್ ಪೇಟೆಗೆ ಬಂದು ಅಲ್ಲಿಂದ ಬರಬಹುದು. ತುಮಕೂರಿನಿಂದ ಸುಮಾರು ೩೦ಕಿಮಿ ದೂರದಲ್ಲಿ ಇದೆ.

ಅಲ್ಲಿಂದ ಸುಮಾರು ೨.೫ ಕಿಮಿ ಏರು ಮುಖದಲ್ಲಿ ಬೆಟ್ಟ ಹತ್ತಿದರೆ ಬೆಟ್ಟದ ತುದಿ ತಲುಪಬಹುದು. ಬೆಟ್ಟ ಹತ್ತುವ ದಾರಿಯಲ್ಲೂ ಕೂಡಾ ಹಲವಾರು ದೇವಸ್ಥಾನಗಳು ನಮಗೆ ಸಿಗುತ್ತದೆ.

ಎಲ್ಲಿಂದ ದೂರ
ಬೆಂಗಳೂರು ೫೪
ತುಮಕೂರು ೩೦

ಶಿವಗಂಗೆ ಬೆಟ್ಟ ಪ್ರವಾಸ ಯಾರಿಗೆ ಸೂಕ್ತ?


ಶಿವಗಂಗೆ ಈ ಮುಂದಿನ ರೀತಿಯ ಪ್ರವಾಸಕ್ಕೆ ಸೂಕ್ತ
  • ದೇವರ ದರ್ಶನ - ಗವಿಗಂಗಾಧರೇಶ್ವರ, ಹೊನ್ನಮ್ಮ ದೇವಿ, ಒಳಕಲ್ ತೀರ್ಥ, ದ್ವಾದಶ ಲಿಂಗ, ಶಾರದಾ ದೇವಸ್ಥಾನ, ಶೃಂಗೇರಿ ಮಠ, ಗಿರಿಗಂಗಾಧರೇಶ್ವರ
  • ಟ್ರೆಕ್ಕಿಂಗ್ - ಇಂತಹ ಸಾಹಸ ಮಾಡಿ ಸುರಕ್ಷಿತವಾಗಿ ಗುಡ್ಡ ಹತ್ತುವ ಅವಕಾಶ ಎಲ್ಲ ಕಡೆ ಸಿಗದು.
  • ಪರಿಸರ ವೀಕ್ಷಣೆ - ಬೆಟ್ಟದ ಸುತ್ತ ಇರುವ ಕಾಡು, ಪರಿಸರ ನೋಡಿಯೇ ಅನುಭವಿಸಬೇಕು.
  • ಐತಿಹಾಸಿಕ ಜಾಗ ವೀಕ್ಷಣೆ - ಇದು ಹೊಯ್ಸಳ ಕಾಲದಿಂದ ಹಿಡಿದು ಶಿವಪ್ಪ ನಾಯಕ, ಕೆಂಪೆಗೌಡರ ಕಾಲದ ವರೆಗಿನ ಇತಿಹಾಸ ಹೊಂದಿದೆ.

ಅಕಸ್ಮಾತ್ ನೀವು  ಒಂದು ಕಡೆಗೆ ಹೋಗಿ ಮುಕ್ಕಾಲು ಗಂಟೆಯಲ್ಲಿ ದೇವರ ದರ್ಶನ ಮಾಡಿ ವಾಪಸ್ ಹೊರಡ ಬೇಕೆಂಬ ಉದ್ದೇಶ ಹೊಂದಿದ್ದರೆ ಖಂಡಿತ ಶಿವಗಂಗೆ ಬೆಟ್ಟ ಸೂಕ್ತ ಅಲ್ಲ.

ನೀವು ಬೆಟ್ಟದ ತುತ್ತ ತುದಿ ಮುಟ್ಟಿ ದೇವರ ದರ್ಶನ ಮಾಡಿ ಬರಲು ನಾಲ್ಕೈದು ಗಂಟೆ ಆದರೂ ಬೇಕು.  ಒಟ್ಟೂ ನಾಲ್ಕು ದೇವಸ್ಥಾನ ಈ ಬೆಟ್ಟದ ದಾರಿಯಲ್ಲಿದೆ. ಇನ್ನು ಬೆಟ್ಟದ ಬುಡದಲ್ಲಿ ಶಾರದಾಂಬಾ ದೇವಸ್ಥಾನ ಸಹ ಇದೆ. ಕನಿಷ್ಟ ಅರ್ಧದಿಂದ ಮುಕ್ಕಾಲು ದಿನ ಸಮಯ ಮಾಡಿಕೊಂಡು ಬರುವದು ಒಳ್ಳೆಯದು.

ಬೆಟ್ಟದ ಸುಮಾರು ೨೦೦ ಮೆಟ್ಟಿಲು ಹತ್ತಿದರೆ ಹೊನ್ನಮ ದೇವಿ ಹಾಗೂ ಗವಿಗಂಗಾಧರೇಶ್ವರ ದೇವರ ದರ್ಶನ ಪಡೆಯಬಹುದು. ಶಿವಗಂಗೆಯ ಬೆಟ್ಟದ ಕೊನೆಯ ದೇವಸ್ಥಾನಕ್ಕೆ ಹೋಗುವ ದಾರಿ ತೀರಾ ಕಡಿದಾಗಿದ್ದು ಅದನ್ನು ಹತ್ತಲು ತುಂಬಾ ಪರಿಶ್ರಮ ಬೇಕು. ವೃದ್ಧರು, ಗರ್ಭಿಣಿಯರು, ಚಿಕ್ಕ ಮಕ್ಕಳು, ಆರೋಗ್ಯದ ಸಮಸ್ಯೆ ಇರುವವರು, ಮಂಡಿ ಮಂಡಿ ನೋವಿರುವವರು ಈ ಬೆಟ್ಟದ ತುದಿ ತಲುಪುವ ಸಾಹಸ ಮಾಡದಿರುವದು ವಾಸಿ. 

ಉಳಿದವರು ಕೂಡಾ ಮಧ್ಯೆ ಮಧ್ಯೆ ಕುಳಿತು ನೀರು, ಪಾನೀಯ ಸೇವಿಸುತ್ತಾ ಸುಧಾರಿಸಿಕೊಂಡು ನಿಧಾನವಾಗಿ ಹತ್ತುವದು ಕ್ಷೇಮ.

ಬೆಟ್ಟದ ಇತಿಹಾಸ

ಶಿವಗಂಗೆ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯುತ್ತಾರೆ. ಬಹಳ ಹಿಂದೆ ಈ ಬೆಟ್ಟಕ್ಕೆ ಕಕುದ್ಗಿರಿ ಎಂಬ ಹೆಸರಿನಿಂದ ಕರೆಯಲಾಗುತಿತ್ತು.

ಹೊಯ್ಸಳ ರಾಜನಾದ ವಿಷ್ಣುವರ್ಧನನ ಹೆಂಡತಿ ಶಾಂತಲಾ ತನಗೆ ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ಈ ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಳಂತೆ. ಆ ಜಾಗಕ್ಕೆ ಶಾಂತಲಾ ಡ್ರಾಪ್ ಎಂದು ಕರೆಯಲಾಗುತ್ತಿದೆ.

ಶಿವಪ್ಪ ನಾಯಕ ಇಲ್ಲಿ ಕೋಟೆಯನ್ನು ೧೬ನೇ ಶತಮಾನದಲ್ಲಿ ಕಟ್ಟಿದರೆ ಆಮೇಲೇ ಕೆಂಪೆಗೌಡರು ತಮ್ಮ ಖಜಾನೆಯ ಒಂದು ಭಾಗ ಇಲ್ಲಿ ರಕ್ಷಿಸಿಟ್ಟಿದ್ದರು. ಆ ಖಜಾನೆಯ ಕೋಣೆಯನ್ನೂ ಈಗಲೂ ನೋಡಬಹುದು.

ಈಗಲೂ ಕೂಡಾ ಶಿವಪ್ಪ ನಾಯಕ ಕಟ್ಟಿಸಿದ ಕೋಟೆಯ ಅಳಿದುಳಿದ ಭಾಗ ನೋಡಬಹುದು. ನೀವು ಹೊನ್ನಮ್ಮ ದೇವಿಯ ದೇವಸ್ಥಾನ ನೋಡಿ ದೇವಾಲಯದ ಆವರಣ ದಾಟಿ ಹೊರ ಹೋಗುವಾಗ ಗುಡ್ಡದ ಮೇಲೆ ಕೋಟೆಯ ಗೋಡೆ ಕಾಣಿಸುತ್ತದೆ.

ಬೆಟ್ಟದಲ್ಲಿರುವ ದೇವಸ್ಥಾನಗಳು ಮತ್ತು ಸ್ಥಳಗಳು

ಶಿವಗಂಗೆ ಬೆಟ್ಟದ ಮೇಲೆ ಈ ಮುಂದಿನ ಪ್ರೇಕ್ಷಣೀಯ ಸ್ಥಳ ಹಾಗೂ ದೇವಸ್ಥಾನಗಳಿವೆ.
  • ಹೊನ್ನಮ ದೇವಿ ಹಾಗೂ ಗವಿಗಂಗಾಧರೇಶ್ವರ ದೇವಸ್ಥಾನ
  • ಒಳಕಲ್ ತೀರ್ಥ
  • ಕೆಂಪೆಗೌಡರ ಖಜಾನೆ
  • ಶಿವ, ಪಾರ್ವತಿ, ನಂದಿ, ದ್ವಾದಶ ಲಿಂಗ ದೇವಸ್ಥಾನ
  • ಬೆಟ್ಟದ ತುದಿಯಲ್ಲಿನ ನಂದಿ ವಿಗ್ರಹ
  • ಗಿರಿ ಗಂಗಾಧರೇಶ್ವರ ದೇವಸ್ಥಾನ

ಮೊದಲು ಶಿವಲಿಂಗ ಬೆಟ್ಟದ ಕೆಳಗಿರುವ ಊರ ಹೊರಗೆ ಗೋಪುರ ಸಹಿತ ದ್ವಾರ ನಮ್ಮನ್ನು ಸ್ವಾಗತಿಸುತ್ತೆ. ವಾಹನಕ್ಕೆ ಒಳಗೆ ಹೋಗಲು ಮುವತ್ತು ರೂ ಪ್ರವೇಶ ಶುಲ್ಕ ಇದೆ. 

ಮುಂದಿನ ಚಿತ್ರದಲ್ಲಿ ಊರಿನ ಪ್ರವೇಶ ದ್ವಾರ ಕಾಣಬಹುದು.


ಈ ಇಕ್ಕಟ್ಟಾದ ದ್ವಾರದ ಮೂಲಕ ವಾಹನ ತೂರಿಸಿಕೊಂಡು ಒಳ ಹೋಗಿ ನೇರ ಹೋದರೆ ಎಡ ಭಾಗದಲ್ಲಿ ಗುಡ್ಡ ಹತ್ತುವ ಪ್ರವೇಶ ದ್ವಾರ ಕಾಣ ಸಿಗುತ್ತದೆ. ಅಲ್ಲಿ ಬಲ ಭಾಗದಲ್ಲಿ ತಿರುಗಿ ಸ್ವಲ್ಪ ದೂರ ಹೋದರೆ ಕಲ್ಯಾಣಿಯ ಅಕ್ಕ ಪಕ್ಕ ನಮ್ಮ ವಾಹನ ನಿಲ್ಲಿಸಬಹುದು.

ಗುಡ್ಡ ಹತ್ತುವ ಪ್ರವೇಶ ದ್ವಾರ



ಮುಂದಿನ ಚಿತ್ರ ಗುಡ್ಡದ ಮುಂದಿನ ಕಲ್ಯಾಣಿ ಹತ್ತಿರದ ಮಾರ್ಕೆಟ್


ಬೆಟ್ಟದ ಪ್ರವೇಶ ದ್ವಾರದ ಮೂಲಕ ಒಳ ಹೋಗಿ ಸುಮಾರು ೨೦೦ ಮೆಟ್ಟಿಲು ಹತ್ತಿದಾಗ ಹೊನ್ನಮ್ಮ ದೇವಿಯ ಹಾಗೂ ಗವಿಗಂಗಾಧರೇಶ್ವರ ದೇವಸ್ಥಾನ ಇದೆ.

ಗವಿ ಎಂದರೆ ಗುಹೆ, ಗಂಗಾಧರ ಎಂದರೆ ಗಂಗೆ ಧರಿಸಿದ ಎಂದು ಅರ್ಥ. ಈಶ್ವರ ಎಂದರೆ ಶಿವ. ಗುಹೆಯಲ್ಲಿರುವ ಗಂಗೆಯನ್ನು ಧರಿಸಿರುವ ಶಿವ ಎಂದರೆ ಗವಿಗಂಗಾಧರೇಶ್ವರ.

ಹೊನ್ನಮ್ಮ ದೇವಿ ಹಾಗೂ ಗವಿಗಂಗಾಧರೇಶ್ವರ ದೇವಾಲಯದ ಆವರಣ.


ದೇವಸ್ಥಾನದ ಗೋಪುರ.

ಗವಿ ಗಂಗಾಧರ ದೇವಸ್ಥಾನದ ಬಳಿಯ ಬಸವಣ್ಣ


ದ್ವಾದಶ ಲಿಂಗ ದೇವಸ್ಥಾನದ ಮುಂದೆ ಶಿವ, ಪಾರ್ವತಿ, ನಂದಿ ಮೂರ್ತಿಗಳಿವೆ.


ಅಲ್ಲಲ್ಲಿ ಪುಟ್ಟ ನೀರಿನ ಕೊಳಗಳಿವೆ.



ಮುಂದಿನ ಚಿತ್ರ ಗುಡ್ಡದ ತುದಿಯಲ್ಲಿ ಹೋಗುವ ದಾರಿಯ ಪಕ್ಕ ಇರುವ ಬಸವಣ್ಣ


ಶಿವಗಂಗೆ ಬೆಟ್ಟದ ತುದಿಯಲ್ಲಿರುವ ಗಿರಿಗಂಗಾಧರೇಶ್ವರ ದೇವಸ್ಥಾನ



ಬೆಟ್ಟದ ಕೆಳಗೆ ಕಲ್ಯಾಣಿಯ ಪಕ್ಕ ಸ್ವಲ್ಪ ದೂರ ನಡೆದರೆ ಶಾರದಾ ದೇವಸ್ಥಾನ ಹಾಗೂ ಶೃಂಗೇರಿ ಶಿವಗಂಗಾ ಶಾರದಾ ಮಠ ಇದೆ. ಅಲ್ಲಿಗೂ ಹೋಗಿ ಶಾರದಾಂಬೆಯ ದರ್ಶನ ಪಡೆದು ಬರಬಹುದು.



ಯಾವ ಕಾಲ ಸೂಕ್ತ?


ಬೆಟ್ಟ ಹತ್ತಲು ಸುಡು ಬಿಸಿಲು ಇದ್ದಾಗ ಕಷ್ಟ, ಬಂಡೆ ಎಲ್ಲಾ ಬಿಸಿಯಾಗಿ ಕಾದಿರುತ್ತದೆ. ಜೋರಾಗಿ ಮಳೆ ಇದ್ದರೂ ಕಷ್ಟ. ಅಕ್ಟೋಬರ್ ನಿಂದ ಮಾರ್ಚ್ ಉತ್ತಮ. ಎಪ್ರಿಲ್, ಮೇ ತಿಂಗಳು ಬಿಸಿಲು ಜಾಸ್ತಿ ಇರುವ ಸಾಧ್ಯತೆ ಜಾಸ್ತಿ.

ಬೆಳಿಗ್ಗೆ ಬೇಗ  ೯ ಗಂಟೆ ಒಳಗೆ ಹತ್ತಲಾರಂಭಿಸಿದರೆ ಕಡಿಮೆ ಬಿಸಿಲಿದ್ದು ನಿಧಾನವಾಗಿ ಜಾಗರೂಕತೆಯಿಂದ ಹತ್ತಿ ಎಲ್ಲ ದೇವಸ್ಥಾನ ನೋಡಿ ಕೆಳಗೆ ಕೂಡಾ ನಿಧಾನವಾಗಿ ಇಳಿಯಬಹುದು.

ದೇವಾಲಯ ಬೆಳಿಗ್ಗೆ ೮:೩೦ ಯಿಂದ ೫ ಗಂಟೆಯವರೆಗೆ ತೆರೆದಿರುತ್ತದೆ.

ಬೆಟ್ಟ ಹತ್ತಲು ಟಿಪ್ಸ್

ಈ ಬೆಟ್ಟ ಹತ್ತಲು ಒಂದಿಷ್ಟು ಟಿಪ್ಸ್ ನಿಮಗಾಗಿ.

೧. ಬೇಗ ಬೆಟ್ಟ ಹತ್ತಲು ಆರಂಭಿಸಿ

ಬೆಳಿಗ್ಗೆ ಬೇಗ ೯ ಗಂಟೆಯೊಳಗೆ ಬೆಟ್ಟ ಹತ್ತಲಾರಂಭಿಸಿದರೆ ಊಟದ ವೇಳೆಗೆ ಕೆಳಗೆ ಇಳಿಯಬಹುದು. ತಡವಾದಷ್ಟು ಬಿಸಿಲಿನ ಜಳಕ್ಕೆ ಬಂಡೆ ಕಾದು ಅನನುಕೂಲವೇ ಜಾಸ್ತಿ.

ತೀರಾ ಮಳೆ ಇದ್ದಾಗ, ಬಿಸಿಲಿನ ಜಳ ಜಾಸ್ತಿ ಇರುವ ಮಟ ಮಟ ಮಧ್ಯಾಹ್ನ,  ಹಾಗೂ ಸಂಜೆಯ ವೇಳೆಗೆ ಬೆಟ್ಟ ಹತ್ತದಿರಿ.

೨. ಬ್ಯಾಕ್ ಪ್ಯಾಕ್ ಬಳಸಿ


ಬ್ಯಾಕ್ ಪ್ಯಾಕ್ ಬಳಸಿ ಅದರಲ್ಲಿ ನೀರು, ಬಾಳೆ ಹಣ್ಣು, ತಿನಿಸುಗಳು ಇರಲಿ. ಸಾಧ್ಯವಾದಷ್ಟು ಕೈಗಳೆರಡೂ ಬರಿದಾಗಿರಲಿ. ಕೈಯಲ್ಲಿ ಒಂದು ನೀರಿನ ಬಾಟಲಿ, ಬ್ಯಾಗ್ ಇದ್ದರೂ ಹತ್ತುವಾಗ / ಇಳಿವಾಗ ಅದರಿಂದ ಅಡಚಣೆಯೇ ಜಾಸ್ತಿ!  ಬೆನ್ನ ಹಿಂದೆ ಹಾಕುವ ಬ್ಯಾಗ್ ಈ ತರಹದ ಚಾರಣಕ್ಕೆ ಸೂಕ್ತ. 

ತುದಿ ತಲುಪಿದ ಹಾಗೆ ಗುಡ್ಡದ ಮೆಟ್ಟಿಲು ತೀರಾ ಕಡಿದಾಗಿದೆ. ಸ್ಟೀಲ್ ಗ್ರಿಲ್ ಹಿಡಿದು ನಿಧಾನವಾಗಿ ಹತ್ತಬೇಕು / ಇಳಿಯಬೇಕು. ಎರಡೂ ಕೈ ಬರಿದಾಗಿದ್ದರೆ ಅನುಕೂಲ.

ಬ್ಯಾಕ್ ಪ್ಯಾಕ್ ಅಲ್ಲೂ ಜಾಸ್ತಿ ವಸ್ತು ತುಂಬಿಕೊಂಡು ಭಾರ ಮಾಡಿ ಕೊಳ್ಳ ಬೇಡಿ.

೩. ನಿಧಾನವಾಗಿ ಸುಧಾರಿಸಿಕೊಳ್ಳುತ್ತಾ ಹತ್ತಿರಿ / ಇಳಿಯಿರಿ


ತುಂಬಾ ಅವಸರದಲ್ಲಿ ಹತ್ತಬೇಡಿ. ಆಗ ಸುತ್ತ ಮುತ್ತಲಿನ ಪೃಕೃತಿ ಸೌಂದರ್ಯ ನೋಡುವ ಆಹ್ಲಾದಿಸುವ ಅವಕಾಶ ಕಳೆದು ಕೊಳ್ಳುವಿರಿ. ಸುಸ್ತು ಕೂಡಾ ಬೇಗ ಆಗುವದು.

ಕೊನೆಯಲ್ಲಿ ತುತ್ತ ತುದಿಯಲ್ಲಿ ಬೆಟ್ಟ ಕಡಿದಾಗಿದ್ದು ಮೊದಲೇ ನಿಮ್ಮ ಎಲ್ಲ ಶಕ್ತಿ ಕಳೆದುಕೊಂಡರೆ ಹತ್ತುವದು ಕಷ್ಟ ಆದೀತು.

೪. ಆಗಾಗ ಕುಳಿತು ದಣಿವಾರಿಸಿ ಕೊಂಡು ಸಾಗಿ


ಬೆಟ್ಟದ ದಾರಿಯ ನಡುವೆ ಹಲವು ಅಂಗಡಿಗಳಿವೆ. ಅಲ್ಲಿ ಕೂರಲು ಜಾಗವಿದೆ. ಸುಸ್ತಾದಾಗ ಅಲ್ಲಿ ಕೂತು ನೀರು ಕುಡಿದು, ಜ್ಯೂಸ್ ಕುಡಿಯಿರಿ. ಹಸಿವಾದಾಗ ಹಣ್ಣು ಹಂಪಲು ತಿನಿಸು ತಿನ್ನಿ. ಹಾಗೆ ದಣಿವಾರಿಸಿಕೊಂಡಾಗ ಮುಂದೆ ನಡೆಯಲು ಶಕ್ತಿ, ಹುರುಪು ಬರುತ್ತದೆ.

೫. ತುಂಬಾ ಚಿಕ್ಕ ಮಕ್ಕಳನ್ನು ಜೊತೆಗೆ ತುತ್ತ ತುದಿಗೆ ಒಯ್ಯಬೇಡಿ


ತುಂಬಾ ಚಿಕ್ಕ ಮಕ್ಕಳನ್ನು ಜೊತೆಗೆ ತುತ್ತ ತುದಿಯವರೆಗೆ ಒಯ್ಯದಿರುವದು ಉತ್ತಮ. ಮೇಲೆ ಹೋದಂತೆ ದಾರಿ ತೀರಾ ಕಡಿದಾಗಿದೆ. ಮಕ್ಕಳನ್ನು ಎತ್ತಿಕೊಂಡು ಅದನ್ನು ಹತ್ತುವದು / ಇಳಿಯುವದು ಸೂಕ್ತವಲ್ಲ.

೬. ಎಲ್ಲೆಂದರಲ್ಲಿ ಕಸ ಬಿಸಾಕಬೇಡಿ

ಕಸವನ್ನು ಅಂಗಡಿಗಳಲ್ಲಿ ಇರುವ ಕಸದ ಬುಟ್ಟಿಯಲ್ಲಿ ಹಾಕಿ. ಬೆಟ್ಟದಲ್ಲಿ ಬಿಸಾಕಿ ಗಲೀಜು ಮಾಡಬೇಡಿ. ಇಡಿ ಬೆಟ್ಟದ ಹಾದಿಯಲ್ಲಿ ಜನ ಪ್ಲಾಸ್ಟಿಕ್ ಬಾಟಲ್, ಕವರ್ ಮೊದಲಾದದ್ದನ್ನು ಬಿಸಾಕಿದ್ದರು. ದಯಮಾಡಿ ಕಸವನ್ನು ಕಸದ ಬುಟ್ಟಿಗೆ ಹಾಕಿ. ಪ್ರತಿ ಅಂಗಡಿಯಲ್ಲೂ ಕಸದ ಬುಟ್ಟಿ ಇದೆ. ಅದರಲ್ಲೇ ಕಸ ಹಾಕಿ ಅಲ್ವಾ?

೭. ಉತ್ತಮ ಶೌಚಾಲಯ ಇರುವದು ಬೆಟ್ಟದ ಬುಡದಲ್ಲಿ ಮಾತ್ರ 

ಬೆಟ್ಟದ ಬುಡದಲ್ಲಿ ಮಾರ್ಕೆಟ್ ಹತ್ತಿರ ಕಲ್ಯಾಣಿ ಪಕ್ಕ ಶೌಚಾಲಯ ಇದೆ. ಅದನ್ನು ಬಿಟ್ಟರೆ ಬೆಟ್ಟ ೫೦ ಮೆಟ್ಟಿಲು ಹತ್ತಿದರೆ ಅಲ್ಲಿ ಅನ್ನ ದಾಸೋಹ ಕೇಂದ್ರದಲ್ಲಿ ಇನ್ನೊಂದು. 

ಬೆಟ್ಟದ ದಾರಿಯಲ್ಲಿ ಇನ್ನೆಲ್ಲೂ ಉತ್ತಮ ಪಬ್ಲಿಕ್ ಶೌಚಾಲಯ ಇಲ್ಲ. ಒಂದು ಇದ್ದರೂ ಅದಕ್ಕೆ ಬಾಗಿಲಿಲ್ಲ. ಬೆಟ್ಟ ಹತ್ತಿಳಿಯಲು ಕನಿಷ್ಟ ನಾಲ್ಕು ಗಂಟೆ ಆದರೂ ಬೇಕು. ಬೆಟ್ಟ ಹತ್ತುವ ಮುನ್ನ ಒಮ್ಮೆ ಬೆಟ್ಟದ ಕೆಳಗೆ ಶೌಚಾಲಯಕ್ಕೆ ಹೋಗುವದು ಉತ್ತಮ.

ಕೊನೆಯ ಮಾತು

ಒಟ್ಟಿನಲ್ಲಿ ಶಿವಗಂಗೆ ಉತ್ತಮ ಪ್ರವಾಸಿ ತಾಣ. ಒಂದು ಕಡೆ ದೇವರ ದರ್ಶನ, ಐತಿಹಾಸಿಕ ಹಿನ್ನೆಲೆ, ಜೊತೆಗೆ ಟ್ರೆಕ್ಕಿಂಗ್ ಅನುಭವ.  ಬೆಂಗಳೂರಿನಿಂದ ಒಂದುವರೆ-ಎರಡು ಗಂಟೆಯೊಳಗೆ ತಲುಪುವಷ್ಟು ಹತ್ತಿರ ಇರುವ ಈ ತಾಣ ವೀಕೆಂಡ್ ಅಲ್ಲಿ ಒಂದೇ ದಿನದಲ್ಲಿ  ಹೋಗಿ ಬರುವಂತಹ ಜಾಗ ಎನ್ನಬಹುದು.

ನೀವು ಶಿವಗಂಗೆ ಬೆಟ್ಟ ಹತ್ತಿದ್ದೀರಾ? ನಿಮ್ಮ ಅನುಭವ ಏನು?

ಥಾಯ್ಲೆಂಡ್ ಪ್ರಯಾಣಕ್ಕೆ ಏನೇನು ತಯಾರಿ ಬೇಕು?

ಇಂಡಿಯಾದಿಂದ ಥಾಯ್ಲೆಂಡ್ ಗೆ ನೀವು ಪ್ರವಾಸಕ್ಕೆ ಹೋಗುವ ವಿಚಾರ ಮಾಡುತ್ತಾ ಇದ್ದೀರಾ? ಹಾಗಿದ್ದರೆ ಈ ಲೇಖನ ಸರಣಿ ತಪ್ಪದೇ ಕೊನೆಯವರೆಗೆ ಓದಿ.

ಯಾವುದೇ ಬೇರೆ ದೇಶಕ್ಕೆ ಹೋಗುವಾಗ ಈ ಮುಂದಿನವು ಬೇಕೆ ಬೇಕು.

  • ನಮ್ಮ ದೇಶದ ಪಾಸ್ ಪೋರ್ಟ್
  • ಹೋಗಲು / ಬರಲು ವಿಮಾನ ಪ್ರಯಾಣದ ಟಿಕೆಟ್
  • ಅಷ್ಟೂ ದಿನಕ್ಕೆ ಹೋಟೆಲ್ / ಅಪಾರ್ಟ್ಮೆಂಟ್ ಬುಕಿಂಗ್. ಅಥವಾ ಉಳಿಯುವ ವ್ಯವಸ್ಥೆ. ನೆಂಟರ ಮನೆ / ಹೋಂ ಸ್ಟೇ ಆದರೆ ಅದರ ಪೂರ್ತಿ ವಿಳಾಸ.
  • ಹೋಗಲಿರುವ ದೇಶದ ಆ ಕಾರ್ಯಕ್ಕೆ ಅನುಮತಿ ಇರುವ ವೀಸಾ (ಟೂರಿಸ್ಟ್ / ಬ್ಯುಸಿನೆಸ್)
  • ಕೆಲಸ ಮಾಡಲು ಹೋಗುತ್ತಿದ್ದರೆ ವರ್ಕ್ ಪರ್ಮಿಟ್ (ಕೆಲಸಕ್ಕೆ ಅನುಮತಿ ಪತ್ರ) ಬರಿ ಟೂರಿಸ್ಟ್  ಆಗಿದ್ದರೆ ಇದು ಬೇಡ.
  • ಆ ದೇಶದ ಹಣ ನಗದು ಹಾಗೂ ಫೊರೆಕ್ಸ್ ಕಾರ್ಡ್ ರೂಪದಲ್ಲಿ (ಎರಡರಲ್ಲೂ)
  • ಇರುವಷ್ಟು ದಿನಕ್ಕೆ ಕೆಲಸ ಮಾಡುವ ಮೊಬೈಲ್ ಸಿಮ್ ಕಾರ್ಡ್
  • ಅಂತರಾಷ್ಟ್ರೀಯ ಪ್ರವಾಸ ವಿಮೆ
ಇನ್ನು ಥಾಯ್ಲೆಂಡ್ ಕೂಡಾ ಬೇರೆ ಏನಲ್ಲ. ಇಲ್ಲಿಗೂ ಕೂಡಾ ಇವೆಲ್ಲವೂ ಬೇಕೆ ಬೇಕು. ಬನ್ನಿ ಒಂದೊಂದಾಗಿ ಏನೇನು ಬೇಕು ಅನ್ನೋದನ್ನು ನೋಡೋಣ.

ಥಾಯ್ಲೆಂಡ್ ಪ್ರವಾಸಕ್ಕೆ ಏನೇನು ಮುಖ್ಯವಾಗಿ ಬೇಕು?

ಥಾಯ್ಲೆಂಡ್ ಭಾರತ ದೇಶದ ಪೂರ್ವ ದಿಕ್ಕಲ್ಲಿ ಮೈನ್ಮಾರ್ ಹಾಗೂ ಕಾಂಬೋಡಿಯಾ ನಡುವೆ ಇದೆ. ಒಂದು ಕಡೆ ಅಂಡಮಾನ್ ಸಮುದ್ರ ತೀರ ಹಾಗೂ ಇನ್ನೊಂದು ಕಡೆ ದಕ್ಷಿಣ ಚೈನಾ ಸಮುದ್ರ ತೀರ ಇದರ ದಕ್ಷಿಣ ಭಾಗದಲ್ಲಿದೆ. ಈ ಥಾಯ್ಲೆಂಡ್ ದೇಶಕ್ಕೆ ಪ್ರವಾಸ ಮಾಡಲು ಯಾವ ಯಾವ ಡಾಕ್ಯುಮೆಂಟ್ ಬೇಕು? ಬನ್ನಿ ನೋಡೋಣ.

೧. ಪಾಸ್ ಪೋರ್ಟ್


ಥಾಯ್ಲೆಂಡ್ ಗೆ ಹೋಗಲು ಪ್ರಯಾಣದ ದಿನದಿಂದ ಕನಿಷ್ಟ ಆರು ತಿಂಗಳು ವ್ಯಾಲಿಡಿಟಿ ಇರುವ ಪಾಸ್ ಪೋರ್ಟ್ ಬೇಕೇ ಬೇಕು. ಅಷ್ಟೇ ಅಲ್ಲ ನೀವು ವಾಪಸ್ ಬರುವ ದಿನ ಕೂಡಾ ಆ ಪಾಸ್ ಪೋರ್ಟ್ ವ್ಯಾಲಿಡ್ ಆಗಿರಬೇಕು. ಎಕ್ಸ್ಪೈರಿ ದಿನ ಮುಗಿದಿರಬಾರದು.

ಯಾವುದೇ ಬೇರೆ ದೇಶಕ್ಕೆ ಹೋಗಲು ಪಾಸ್ ಪೋರ್ಟ್ ಬೇಕೇ ಬೇಕು. ಅದಿಲ್ಲದೇ ಇಲ್ಲಿಂದ ಇಂಟರ್ನ್ ನ್ಯಾಶನಲ್ ವಿಮಾನಕ್ಕೆ ನಿಮ್ಮನ್ನು ಹತ್ತಲು ಬಿಡುವದಿಲ್ಲ. ಥಾಯ್ಲೆಂಡ್ ಕೂಡಾ ಬೇರೆ ದೇಶ ಅಲ್ವಾ.

ನಿಮ್ಮ ಹಾಗೂ ನಿಮ್ಮ ಜೊತೆ ಬರಲಿರುವ ಎಲ್ಲರ ಪಾಸ್ ಪೋರ್ಟ್ ತೆಗೆದು ಎಕ್ಸ್ಪೈರಿ ದಿನಾಂಕ ಒಮ್ಮೆ ಪರಿಶೀಲಿಸಿ. ಅಕಸ್ಮಾತ್ ನೀವು ಹೊರಡುವ ದಿನ ಕರೆಕ್ಟ್ ಆಗಿ ೬ ತಿಂಗಳು ಸಮಯ ಇರುವ ಹಾಗಿದ್ದರೆ ಪಾಸ್ ಪೋರ್ಟ್ ನವೀಕರಣ ಮಾಡುವದು ಉತ್ತಮ. ಯಾಕೆಂದರೆ ಪ್ರಯಾಣದ ದಿನ ಯಾವುದೋ ಕಾರಣಕ್ಕೆ ಒಂದೆರಡು ದಿನ ಅಥವಾ ವಾರ ಮುಂದೂಡಲು ಅನುಕೂಲ ಆಗುತ್ತದೆ.

ಚಿಕ್ಕ ಹಸುಳೆಯಿಂದ ಹಿಡಿದು ಬಾಲಕ, ಬಾಲಕಿಯವರೆಗೆ ಎಲ್ಲ ವಯಸ್ಸಿನವರಿಗೂ ಪಾಸ್ ಪೋರ್ಟ್ ಬೇಕೆ ಬೇಕು. ನಿಮ್ಮ ಜೊತೆ ಬರುತ್ತಿರುವ ಮಕ್ಕಳಿಗೆ ಪಾಸ್ ಪೋರ್ಟ್ ಇದೆ ಎಂದು ಪರಿಶೀಲಿಸಿ.

ಭಾರತದ ಪಾಸ್ ಪೋರ್ಟ್ ಅನ್ನು ನೀವು ಈ ಪಾಸ್ ಪೋರ್ಟ್ ಸೇವಾ ವೆಬ್ ತಾಣದ ಸಹಾಯದ ಮೂಲಕ ಪಡೆಯಬಹುದು.

ಮತ್ತೊಮ್ಮೆ ಹೇಳುತ್ತಿದ್ದೇನೆ ನೀವು ವಿಮಾನ ಹತ್ತುವ ಸಮಯದಲ್ಲಿ ಪಾಸ್ ಪೋರ್ಟ್ ಕನಿಷ್ಟ ೬ ತಿಂಗಳ ವ್ಯಾಲಿಡಿಟಿ ಇರದಿದ್ದರೆ ನೀವು ಪ್ರಯಾಣ ಮಾಡಲಾಗದು. ಹಾಗೆಯೇ ಏರ್ ಪೋರ್ಟ್ ನಿಂದ ಮನೆಗೆ ವಾಪಸ್ ಬರಬೇಕಾಗುತ್ತದೆ.

೨. ವಿಮಾನದ ಟಿಕೆಟ್

ಥಾಯ್ಲೆಂಡ್ ಗೆ ಪ್ರವೇಶ ಮಾಡಲು ಹೋಗಲು ಹಾಗೂ ಬರುವ ವಿಮಾನ ಟಿಕೆಟ್ ಎರಡು ಕೂಡಾ ಬೇಕು. ನೆನಪಿಡಿ ಯಾವುದೇ ದೇಶ ನೀವು ಅಲ್ಲಿನ ಪ್ರಜೆ(ಸಿಟಿಜನ್) ಅಲ್ಲದಿದ್ದರೇ ರಿಟರ್ನ್ ಟಿಕೆಟ್ ಇಲ್ಲದೇ ಪ್ರವೇಶ ನೀಡುವದಿಲ್ಲ.

ವಿಮಾನ ಬುಕಿಂಗ್ ಮಾಡುವಾಗ ಗಮನದಲ್ಲಿಡಿ ನೀವು ವಿಮಾನ ಬುಕಿಂಗ್ ಗೆ ನೀಡುವ ವಿವರ ನಿಮ್ಮ ಪಾಸ್ ಪೋರ್ಟ್ ಜೊತೆ ಅಕ್ಷರಶಃ ಹೊಂದಾಣಿಕೆ ಆಗಬೇಕು. ಪಾಸ್ ಪೋರ್ಟ್ ಅಥವಾ ಅದರ ಕಾಪಿ ಎದುರಲ್ಲಿ ಇಟ್ಟುಕೊಂಡು ವಿಮಾನ ಬುಕಿಂಗ್ ಮಾಡಿ. ಹೆಸರು, ಜನ್ಮದಿನಾಂಕ ಇತ್ಯಾದಿ ಸ್ಪೆಲ್ಲಿಂಗ್ ಮಿಸ್ಟೇಕ್ ಇಲ್ಲದೇ ಅದೇ ಹೆಸರಲ್ಲಿ ಬುಕಿಂಗ್ ಮಾಡಿ.

ನೀವು ಮೇಕ್ ಮೈ ಟ್ರಿಪ್, ಯಾತ್ರಾ ಇತ್ಯಾದಿ ವೆಬ್ ತಾಣದಿಂದ ಬುಕಿಂಗ್ ಮಾಡಬಹುದು.

ಹೆಚ್ಚಿನ ಅಂತರಾಷ್ಟ್ರೀಯ ವಿಮಾನ ಮಧ್ಯ ರಾತ್ರಿ ಇರುತ್ತದೆ. ಯಾವ ದಿನಾಂಕ ರಾತ್ರಿಯೋ ಬೆಳಿಗ್ಗೆ ಎಲ್ಲ ಒಮ್ಮೆ ನೋಡಿ ಚೆಕ್ ಮಾಡಿ ಫೈನಲ್ ಬುಕಿಂಗ್ ಮಾಡಿ. ಬುಕಿಂಗ್ ಮಾಡುವಾಗ ಅವಸರ ಮಾಡುವದು ತರವಲ್ಲ. ಒಮ್ಮೆ ಬುಕಿಂಗ್ ಆದಮೇಲೆ ಬದಲಾಯಿಸಲು ಅನವಶ್ಯಕ ವೆಚ್ಚ ಆಗುತ್ತದೆ.

೩. ಉಳಿಯಲು ವ್ಯವಸ್ಥೆ

ಥೈಲ್ಯಾಂಡ್ ಅಲ್ಲಿ ಇರುವಷ್ಟು ದಿನ ಉಳಿಯಲು ವ್ಯವಸ್ಥೆ ಕೂಡಾ ಇಲ್ಲಿಂದಲೇ ಮಾಡಬೇಕು. ನಿಮ್ಮ ನೆಂಟರ ಮನೆ ಇದ್ದರೆ ಸರಿ. ಅವರ ಜೊತೆ ಮಾತನಾಡಿ, ವಿಳಾಸ, ಜಾಗ ಎಲ್ಲ ಪಡೆಯಿರಿ.

ಇಲ್ಲಾಂದ್ರೆ ಅಷ್ಟು ಹೋಟೆಲ್ ಬುಕಿಂಗ್ ಮಾಡಲೇ ಬೇಕು. ನಿಮಗೆ ಬೇಕಾದ ವ್ಯವಸ್ಥೆ ಇದೆ ಖಚಿತ ಮಾಡಿಕೊಂಡು ಬುಕಿಂಗ್ ಮಾಡಿ.

ನೀವು ಮೇಕ್ ಮೈ ಟ್ರಿಪ್, ಯಾತ್ರಾ ಇತ್ಯಾದಿ ವೆಬ್ ತಾಣದಿಂದ ಹೋಟೆಲ್ ಬುಕಿಂಗ್ ಮಾಡಬಹುದು.

ನೀವು ಏರ್ ಬಿಎನ್ ಬಿ ಅಂತಹ ತಾಣ ಬಳಸಿ ಹೋಂಸ್ಟೇ, ಅಪಾರ್ಟ್ ಮೆಂಟ್ ಕೂಡಾ ಬುಕ್ ಮಾಡಬಹುದು. ಆಗ ಕಡಿಮೆ ದರದಲ್ಲಿ ಉಳಿಯುವ ವ್ಯವಸ್ಥೆ ಆದೀತು. ಆದರೆ ಸ್ಟಾರ್ ಹೋಟೆಲ್ ಸೌಲಭ್ಯ, ಸಿಟಿಗೆ ಹತ್ತಿರ ಇಲ್ಲದಿರಬಹುದು. ನೋಡಿಕೊಂಡು ಬುಕ್ ಮಾಡಿ.

ಹೊಟೆಲ್ ಅಥವಾ ಹೋಂ ಸ್ಟೇ ಬುಕಿಂಗ್ ಮಾಡುವಾಗ ಸಿಟಿಯ ಒಳಗೇ ಇದ್ದರೆ ಉತ್ತಮ. ನಿಮಗೆ ಲಾಂಡ್ರಿ, ಭಾರತೀಯ ಊಟ, ಬಸ್, ಮೆಟ್ರೋ, ಆಟೋ ಹೀಗೆ ಎಲ್ಲ ಸೌಲಭ್ಯ ಕೈಗೆ ಎಟುಕುವಂತೆ ಇರುತ್ತದೆ. ಥಾಯ್ಲೆಂಡ್ ನ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಚಡ್ಡಿ ಲಾಂಡ್ರಿಯಲ್ಲಿ ತೊಳೆಯುವ ಬೆಲೆಗೆ ಹೆಚ್ಚು ಕಡಿಮೆ ನಾವಿಲ್ಲಿ ಹೊಸ ಚಡ್ಡಿ ಅಂಗಡಿಯಲ್ಲಿ ಖರೀದಿ ಮಾಡಬಹುದು! 

ಹೋಟೆಲ್ ಒಳಗಿನ ಲಾಂಡ್ರಿ ಸೇವೆಗಿಂತ ಹೊರಗಡೆಯ ಸೆಲ್ಪ್ ಸರ್ವೀಸ್ ಲಾಂಡ್ರಿ ಉತ್ತಮ. ಥಾಯ್ಲೆಂಡ್ ಪಟ್ಟಾಯಾದಲ್ಲಿ ಹೊರಗಡೆ ಹೋದರೆ ಸುಮಾರು ೯೦ ಭಾಟ್ ( ಸುಮಾರು ೨೧೦ ರೂ) ಬೆಲೆಗೆ ಹತ್ತು ಕೆಜಿ ಬಟ್ಟೆ ಮಶೀನ್ ಅಲ್ಲಿ ತೊಳೆದು ಡ್ರೈಯರ್ ಅಲ್ಲಿ ಒಣಗಿಸಿಕೊಂಡು ಬರಬಹುದು! ಇದಕ್ಕೆ ಬ್ಯಾಂಕಾಕ್ ಸಿಟಿ ಅಲ್ಲಿ ೧೩೦ ಭಾಟ್ (ಸುಮಾರು ೩೦೫ರೂ) ಆಗುತ್ತದೆ.

ಹೊಟೆಲ್ ಬುಕಿಂಗ್, ಉಳಿಯುವ ಜಾಗದ ವಿಳಾಸ ಅಥವಾ ನೆಂಟರ ಆಹ್ವಾನ ಪತ್ರಿಕೆ ಇಲ್ಲದಿದ್ದರೆ ನಿಮಗೆ ವೀಸಾ ಆಗದು. ಒಟ್ಟಿನಲ್ಲಿ ನಿಮಗೆ ಥಾಯ್ಲೆಂಡ್ ಅಲ್ಲಿ ಉಳಿಯಲು ವ್ಯವಸ್ಥೆ ಇರುವದು ಅವರಿಗೆ ಖಚಿತ ಆಗಬೇಕು.

೪. ಥಾಯ್ಲೆಂಡ್ ಟೂರಿಸ್ಟ್ ವಿಸಾ

ಥಾಯ್ಲೆಂಡ್ ಪ್ರವಾಸಕ್ಕೆ ಟೂರಿಸ್ಟ್ ವಿಸಾ ಬೇಕು. ನೀವು ಅಲ್ಲಿ ಕೆಲಸಕ್ಕೆ ಹೋಗುತ್ತಿದ್ದರೆ ನಾನ್ ಇಮ್ಮಿಗ್ರಿಶನ್ ವಿಸಾ ಹಾಗೂ ವರ್ಕ್ ಪರ್ಮಿಟ್ ಬೇಕು. ಅದಕ್ಕೆ ನಿಮಗೆ ಕೆಲಸ ಕೊಡುತ್ತಿರುವ ಕಂಪನಿಗಳೇ ಸಹಾಯ ಮಾಡುತ್ತವೆ.

ನೀವು ಬೆಂಗಳೂರಿನಲ್ಲಿಯೇ ಥಾಯ್ಲೆಂಡ್ ವಿಸಾ ಗೆ ಅರ್ಜಿ ಹಾಕಿ ಟೂರಿಸ್ಟ್ ವೀಸಾ ಪಡೆಯಬಹುದು. ಅಥವಾ ಥಾಯ್ಲೆಂಡ್ ನ ಬ್ಯಾಂಕಾಕ್ ಏರ್ ಪೋರ್ಟ್ ಅಲ್ಲಿಯೇ ವೀಸಾ ಆನ್ ಎರೈವಲ್ ಮೂಲಕ ವೀಸಾ ಪಡೆಯಬಹುದು.

ಬೆಂಗಳೂರಿನಲ್ಲಿ ಥಾಯ್ಲೆಂಡ್ ವೀಸಾಗೆ  ಅರ್ಜಿ ಹಾಕಲು ವಿಎಫ್ ಎಸ್ ಗ್ಲೋಬಲ್ ನ ಈ ವೆಬ್ ತಾಣಕ್ಕೆ ಭೇಟಿ ಕೊಡಿ. ಹೆಚ್ಚು ಕಡಿಮೆ ವೀಸಾ ಆನ್ ಅರೈವಲ್ ನ ಅರ್ಧ ಬೆಲೆಗೆ ಇಲ್ಲಿ ವೀಸಾ ಪಡೆಯಬಹುದು. ಆದರೆ ಸಮಯ ಜಾಸ್ತಿ (೫ ರಿಂದ ಹತ್ತು ದಿನ) ಬೇಕು. ಆದರೆ ತುಂಬಾ ಜನ ಹೋಗುತ್ತಿದ್ದರೆ ನೀವು ಬೆಂಗಳೂರಿನಲ್ಲಿದ್ದರೆ ಹಾಗೂ ಸಮಯ ಇದ್ದರೆ ಮೊದಲೇ ಪ್ಲ್ಯಾನ್ ಮಾಡಿ ಈ ಮಾರ್ಗದಲ್ಲೇ ವೀಸಾ ಪಡೆಯಿರಿ.

ವೀಸಾ ಆನ್ ಅರೈವಲ್ ಗೆ ಬ್ಯಾಂಕಾಕ್ ಏರ್ ಪೋರ್ಟ್ ಅಲ್ಲಿ ಹೋಗಿ ಅರ್ಜಿ ಹಾಕಬಹುದು. ಅಲ್ಲಿ ಕೂಡಾ ಫಾಸ್ಟ್ ಟ್ರ್ಯಾಕ್ ಹಾಗೂ ಸಾಧಾರಣ ಕ್ಯೂ ಇದೆ. ೨೦೨೨ರಲ್ಲಿ ಫಾಸ್ಟ್ ಟ್ರ್ಯಾಕ್ ಗೆ ಒಬ್ಬರಿಗೆ ೨೨೦೦ ಭಾಟ್ ( ೫೨೦೦ ರೂ) ಹಾಗೂ ಸಾಧಾರಣ ಕ್ಯೂ ಅಲ್ಲಿ ಒಬ್ಬರಿಗೆ ೨೦೦೦ ಭಾಟ್ ( ೪೭೦೦ರೂ) ಚಾರ್ಜ್ ಮಾಡುತ್ತಾರೆ. ನೆನಪಿಡಿ ನೀವು ಈ ಭಾಟ್ ಹಣವನ್ನು ಕ್ಯಾಶ್ ರೂಪದಲ್ಲೇ ನೀಡಬೇಕು.

ವೀಸಾ ಗೆ ಫೋಟೋ ೬೦ಮಿಮಿ * ೪೦ಮಿಮಿ ಗಾತ್ರದ ೭೦% ಮುಖ ಇರುವ ಭಾವಚಿತ್ರ ಬೇಕು. ಪಾಸ್ ಪೋರ್ಟ್ ಫೋಟೋ ಆಗದು. ಥಾಯ್ ವೀಸಾಗೆ ಬೇಕಾಗುವ ಫೋಟೋ ವಿವರಗಳಿಗೆ ಈ ವೆಬ್ ತಾಣ ನೋಡಿ. ನೆನಪಿಡಿ ನೀವು ಭಾರತದಲ್ಲಿ ಫೋಟೋ ಈ ಗಾತ್ರದಲ್ಲಿ ಮಾಡಿಸಿ ಒಯ್ಯದಿದ್ದರೆ ಬ್ಯಾಕಾಂಕ್ ಏರ್ ಪೋರ್ಟ್ ಅಲ್ಲಿ ಸುಮಾರು ೨೫೦ ಭಾಟ್ (೫೯೦ರೂ ೨ಫೋಟೋಗೆ) ಕೊಟ್ಟು ಒಬ್ಬರ ಫೋಟೋ ತೆಗೆಸುವ ಭಾಗ್ಯ ನಿಮ್ಮದಾಗುತ್ತದೆ!

ವೀಸಾ ಆನ್ ಅರೈವಲ್ ಗೆ ಇನ್ನೊಂದು ನಿಯಮ ಇದೆ. ನಿಮ್ಮ ಬಳಿ ಒಬ್ಬರಿಗೆ ೧೦ ಸಾವಿರ ಭಾಟ್ ಕ್ಯಾಶ್ ಇರಲೇ ಬೇಕು! ಒಂದು ಕುಟುಂಬಕ್ಕೆ ೨೦ ಸಾವಿರ ಭಾಟ್ ಲೆಕ್ಕಾಚಾರದಲ್ಲಿ ಹಣ ತೋರಿಸಬೇಕು. ಒಂದಕ್ಕಿಂತ ಹೆಚ್ಚು ಕುಟುಂಬ ಇದ್ದರೆ ಪ್ರತಿ ಕುಟುಂಬಕ್ಕೆ ೨೦ ಸಾವಿರ ಭಾಟ್ ನೋಟುಗಳನ್ನು ವೀಸಾ ಆಫೀಸರಿಗೆ ತೋರಿಸ ಬೇಕು. 

ಅಕಸ್ಮಾತ್ ನೀವು ಈ ಹಣ ಇಲ್ಲಿಂದ ಒಯ್ಯದಿದ್ದರೆ ದುಬಾರಿ ಕಮಿಶನ್ ಹಾಗೂ ಫಾರೆಕ್ಸ್ ಬೆಲೆಗೆ ಭಾಟ್ ಖರೀದಿಸಬೇಕು. ಫಾರೆಕ್ಸ್ ಖರೀದಿಸಲು ನಿಮ್ಮ ಅಕೌಂಟ್ ಅಲ್ಲಿ ಹಣ ಇಲ್ಲದಿದ್ದರೆ ಅಥವಾ ಸಮಸ್ಯೆ ಕಾಣಿಸಿಕೊಂಡರೆ ಹಾಗೆಯೇ ಏರ್ ಪೋರ್ಟ್ನಿಂದಲೇ ನಿಮ್ಮನ್ನು ಮೂಲ ದೇಶಕ್ಕೆ ವಾಪಸ್ ಕಳುಹಿಸುತ್ತಾರೆ! ದುಡ್ಡೇ ದೊಡ್ಡಪ್ಪ ಎಂದು ಸುಮ್ಮನೆ ಹೇಳುತ್ತಾರೆಯೇ?

೨೦ ಸಾವಿರ ಭಾಟ್ (೪೭ ಸಾವಿರ ರೂ) ದೊಡ್ಡ ಅಮೌಂಟ್ ಎನ್ನಿಸಬಹುದು. ಆದರೆ ನಾಲ್ಕು ಜನ ಇದ್ದರೆ, ನೀವು ಎಲ್ಲಿಯೂ ಎಂಟ್ರಾನ್ಸ್ ಟಿಕೆಟ್ ಬುಕ್ ಮಾಡಿರದಿದ್ದರೆ ಈ ಹಣ ಟಿಕೆಟ್, ಊಟ, ತಿಂಡಿಗೆ ಬಳಕೆ ಆಗಿ ಕರಗಲು ಜಾಸ್ತಿ ದಿನ ಬೇಕಿಲ್ಲ. ನೀವು ಕ್ಯಾಬ್ ಎಲ್ಲ ಬುಕ್ ಮಾಡಿರದಿದ್ದರೆ ಈ ಹಣ ಕಡಿಮೆ ಆದರೂ ಆಶ್ಚರ್ಯ ಇಲ್ಲ.

ಚಿಂತಿಸಬೇಡಿ ಮುಂಬರುವ ಭಾಗದಲ್ಲಿ ಥೈಲ್ಯಾಂಡ್ ಅಲ್ಲಿ ಹಣ ಉಳಿಸುವ ಹಲವು ಮಾರ್ಗಗಳನ್ನು ನಿಮಗೆ ತಿಳಿಸುತ್ತೇನೆ.

೫. ಫಾರೆಕ್ಸ್ ಹಣ ಹಾಗೂ ಕಾರ್ಡ್


ಪ್ರತಿ ದೇಶಕ್ಕೆ ಅದರದ್ದೇ ಆದ ಕರೆನ್ಸಿ ಇರುತ್ತೆ ಅಲ್ವಾ. ಅದೇ ರೀತಿ ಥಾಯ್ಲೆಂಡಿನ ಕರೆನ್ಸಿ ಹೆಸರು ಥಾಯ್ ಭಾಟ್. ೧ ಥಾಯ್ ಭಾಟ್ ಪಡೆಯಲು ೨.೨೮ ರಿಂದ ೨.೪೦ ರೂ ವಿನಿಮಯ ಚಾರ್ಜ್ ಸೇರಿ ಖರ್ಚಾಗುತ್ತದೆ.

ಥಾಯ್ಲೆಂಡ್ ಅಲ್ಲಿ ದೇವಸ್ಥಾನ, ನ್ಯಾಶನಲ್ ಪಾರ್ಕ್, ಝೂ, ಐಲ್ಯಾಂಡ್ ಎಲ್ಲ ಕಡೆ ಹೋಗಲು ಕ್ಯಾಬ್, ಮೆಟ್ರೋ, ಬಸ್, ಎಂಟ್ರಾನ್ಸ್ ಫೀ ಗೆ ಹಣ ಬೇಕೆ ಬೇಕು. ಅದೂ ಥೈಲ್ಯಾಂಡ್ ಕರೆನ್ಸಿ ಆದ ಭಾಟ್ ರೂಪದಲ್ಲಿ. ನೀವು ಅಲ್ಲಿಯೂ ರುಪಾಯಿಯನ್ನು ಭಾಟ್ ಗೆ ಬದಲಾಯಿಸಬಹುದು. ಆದರೆ ದುಬಾರಿ. ಏರ್ ಪೋರ್ಟ್ ಅಲ್ಲಿ ಮಾಡಿಸಿದರಂತೂ ಕಥೆ ಮುಗಿಯಿತು! ಭಾರತದಲ್ಲೇ ಭಾಟ್ ಪರಿವರ್ತಿಸಿ ಒಯ್ಯುವದು ಜಾಣತನ.

ನಾನು ಮೇಲೆ ತಿಳಿಸಿದಂತೆ ಕಡಿಮೆ ಎಂದರೂ ೧೦ ಸಾವಿರ ಭಾಟ್ ಒಬ್ಬರಿಗೆ, ೨೦ ಸಾವಿರ ಭಾಟ್ ಒಂದು ಕುಟುಂಬಕ್ಕೆ ಕ್ಯಾಶ್ ಒಯ್ಯಲೇ ಬೇಕು. ಅಷ್ಟೇ ಹಣ ಫಾರೆಕ್ಸ್ ಕಾರ್ಡ್ ರೂಪದಲ್ಲಿ ಒಯ್ಯುವದು ಒಳ್ಳೆಯದು. ನಾನು ತಿಳಿಸಿದಂತೆ ಥೈಲ್ಯಾಂಡ್ ಅಲ್ಲಿ ಹಣ ನೀವಿದ್ದಷ್ಟು ದಿನ ನೀರಿನಂತೆ ಖರ್ಚಾಗುತ್ತದೆ! 

ನೀವು ವಾಪಸ್ ಬಂದ ಮೇಲೆ ಭಾಟ್ ನೋಟುಗಳನ್ನು ಹಾಗೂ ಫಾರೆಕ್ಸ್ ಕಾರ್ಡ್ ಅನ್ನು ಮತ್ತೆ ರೂಪಾಯಿಗೆ ಬದಲಾಯಿಸಬಹುದು. ಅದಕ್ಕೆ ಮತ್ತೆ ಕಮಿಶನ್ ಕೊಡಬೇಕು.

ನೆನಪಿಡಿ ಭಾರತದ ಹಾಗೆ ಅಲ್ಲಿ ಚಿಕ್ಕ ವ್ಯಾಪಾರಿಗಳು ಫೋನ್ಪೇ, ಪೇಟಿಎಂ, ಫಾರೆಕ್ಸ್ ಕಾರ್ಡ್ ಸ್ವೀಕರಿಸುವದಿಲ್ಲ. ಕ್ಯಾಶ್ ಕೊಡಲೇ ಬೇಕು. ಅದಕ್ಕೆ ಎಲ್ಲೆಲ್ಲಿ ಫಾರೆಕ್ಸ್ ಕಾರ್ಡ್ ಸ್ವೀಕರಿಸುತ್ತಾರೋ ಅಲ್ಲೆಲ್ಲ ಅದನ್ನೇ ಬಳಸುವದು ಒಳ್ಳೆಯದು.

ವೀಸಾ ಆನ್ ಎರೈವಲ್ ಗೆ ಕೂಡಾ ಕ್ಯಾಶ್ ಬೇಕು. ಇಲ್ಲಿ ವೀಸಾ ಮಾಡಿಸದಿದ್ದರೆ ಪ್ರತಿ ಒಬ್ಬರಿಗೆ ೨೨೦೦ ಭಾಟ್ ಲೆಕ್ಕಾಚಾರದಲ್ಲಿ ಎಕ್ಸ್ಟ್ರಾ ಕ್ಯಾಶ್ ವೀಸಾಗಾಗಿ ತೆಗೆದು ಕೊಳ್ಳಬೇಕು.

ನೀವು ಪ್ಯಾಕೆಜ್ ಟ್ರಿಪ್ ಅಲ್ಲಿ ಹೋಗುತ್ತಿದ್ದರೆ ಹೆಚ್ಚಿನ ಹಣ ಇಲ್ಲೇ ಪಾವತಿ ಮಾಡಿರುತ್ತೀರಿ. ಯಾವ ಯಾವ ಎಂಟ್ರಾನ್ಸ್ ಫೀ / ಊಟ ಪ್ಯಾಕೇಜ್ ಅಲ್ಲಿ ಇಂಕ್ಲೂಡ್ ಆಗಿಲ್ಲ ಅದಕ್ಕೆ ಕ್ಯಾಶ್ ಬೇಕು. ಶಾಪಿಂಗ್ ಗೆ ಹಣ್ಣು/ ಬ್ರೆಡ್ ಖರೀದಿಗೆ ಕೂಡಾ ಬೇಕು. 

ಕೆಲವು ಕಡೆ ಶಾಪಿಂಗ್ ಸೆಂಟರ್ ಗಳಲ್ಲೂ ಫಾರೆಕ್ಸ್ ಕಾರ್ಡ್ ಬಳಸಬಹುದು. ದೊಡ್ಡ ಆಸ್ಪತ್ರೆಗಳಲ್ಲೂ, ದೊಡ್ಡ ಅಂಗಡಿಗಳಲ್ಲಿ ಫಾರೆಕ್ಸ್ ಕಾರ್ಡ್ ಬಳಕೆ ಆಗುತ್ತದೆ.

ಫಾರೆಕ್ಸ್ ಅನ್ನು ಟ್ರಿಪ್ ಗಿಂತ ತುಂಬಾ ಮೊದಲೇ ಪ್ಲ್ಯಾನ್ ಮಾಡಿ ತನ್ನಿ. ಮೊದಲೇ ಫಾರೆಕ್ಸ್ ಗೆ ಹೋಗಿ ನಿಮಗೆ ಬೇಕಾದ ಭಾಟ್ ಕ್ಯಾಶ್ ಸ್ಟಾಕ್ ಇದೆ ಎಂದು ಕೇಳಿ. ಕೆಲವೊಮ್ಮೆ ಸ್ಟಾಕ್ ಇರದಿದ್ದರೆ ಸಮಯ ಬೇಕು. ಕಡೆಯ ಕ್ಷಣಗಳಲ್ಲಿ ಹೋಗಿ ತಕ್ಷಣ ಭಾಟ್ ಕ್ಯಾಶ್ ಬೇಕು ಎಂದರೆ ಎಲ್ಲಾ ಸಲ ಸಿಗದು.

ಆನ್ ಲೈನ್ ಮನೆಗೇ ತರಿಸುವದಕ್ಕಿಂತ ನೀವೇ ಫಾರೆಕ್ಸ್ ಸೆಂಟರ್ ಗೆ ಹೋಗಿ ತಂದರೆ ನಿಮಗೆ ಕಡಿಮೆ ದರದಲ್ಲಿ ಭಾಟ್ ದೊರೆಯುತ್ತದೆ.

ಏನಾದ್ರು ಎಮರ್ಜೆನ್ಸಿ ಇದ್ದರೆ ಉಪಯೋಗಿಸಲು ಬ್ಯಾಂಕಿನ ವೀಸಾ ಅಥವಾ ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್ ಇರಲಿ. ಅದಕ್ಕೆ ಅಂತರಾಷ್ಟ್ರೀಯ ಟ್ರಾನ್ಸಾಕ್ಷನ್ ಅನ್ನು ಅರ್ಜಿ ಕೊಟ್ಟು ಎಕ್ಟಿವೇಟ್ ಮಾಡಿಸಿಕೊಂಡರೆ ಉತ್ತಮ. ನೆನಪಿಡಿ ಈ ಡೆಬಿಟ್ ಕಾರ್ಡ್ ಕೇವಲ ಆಪತ್ಕಾಲಕ್ಕೆ ಮಾತ್ರ. ಯಾಕೆಂದರೆ ಇಂಡಿಯನ್ ಡೆಬಿಟ್ ಕಾರ್ಡ್ ನಿಂದ ಥೈಲಾಂಡ್ ಹಣ ಡ್ರಾ ಮಾಡಲು ತುಂಬಾ ಖರ್ಚು. ವಿನಿಮಯ ಬೆಲೆ ಕೂಡಾ ಜಾಸ್ತಿ. 

ಆದರೆ ಅಗತ್ಯ ಇದ್ದಾಗ ಒಮ್ಮೆ ಏಟಿಎಂ ಅಲ್ಲಿ ಹೋಗಿ ವಿತ್ ಡ್ರಾ ಮಾಡಿ, ಚಿಕ್ಕ ಚಿಕ್ಕ ಅಮೌಂಟ್ ರೀತಿಯಲ್ಲಿ ಅಂಗಡಿಗಳಲ್ಲಿ ಡೆಬಿಟ್ ಕಾರ್ಡ್ ಬಳಸಬೇಡಿ. ಕ್ಯಾಶ್ ಅಥವಾ ಫಾರೆಕ್ಸ್ ಕಾರ್ಡ್ ಮಾತ್ರ ಬಳಸಿ.

ಏನೆನು ಖರ್ಚು ಎಂಬುದನ್ನು ವಿವರವಾಗಿ ನಿಮಗೆ ಮುಂದಿನ ಭಾಗಗಳಲ್ಲಿ ತಿಳಿಸುತ್ತೇನೆ.

 ೬. ಇರುವಷ್ಟು ದಿನಕ್ಕೆ ಕೆಲಸ ಮಾಡುವ ಮೊಬೈಲ್ ಸಿಮ್ ಕಾರ್ಡ್

ನೀವು ಹೋಗುತ್ತಾ ಇರುವದು ಹೊಸ ದೇಶಕ್ಕೆ, ಅಲ್ಲಿನ ದಾರಿ, ಜಾಗ ಎಲ್ಲ ಹೊಸತು ಹೊಸತು. ಇಂತಹ ಸಂದರ್ಭದಲ್ಲಿ ಪ್ರವಾಸಿ ತಾಣ, ಲಾಂಡ್ರಿ, ಟಾಯ್ಲೆಟ್, ಊಟ, ತಿಂಡಿ, ಭಾರತೀಯ ಹೋಟೆಲ್ ಎಲ್ಲ ಹುಡುಕಲು ಗೂಗಲ್ ಮ್ಯಾಪ್ ನಿಮ್ಮ ಆಪ್ತ ಬಾಂಧವ.

ಅಷ್ಟೇ ಅಲ್ಲ ನಿಮ್ಮ ಮನೆಗೆ ವಾಟ್ಸಪ್ ಕಾಲ್ ಮಾಡಿ ತಿಳಿಸಲೂ ಕೂಡಾ ಅನುಕೂಲ. ಒಂದು ೧೫ಜಿಬಿ ಡಾಟಾ ಇದ್ದರೆ ಸಾಕು. ಏರ್ ಪೋರ್ಟ್ ಹಾಗೂ ಹೋಟಲ್ ಗಳಲ್ಲಿ ನಿಮಗೆ ಫ್ರೀ ವೈಫೈ ಸಿಗುತ್ತೆ. ಅಲ್ಲಿ ಅದನ್ನು ಬಳಸಿ. ನೀವು ಭಾರತದಲ್ಲೇ ಮ್ಯಾಟ್ರಿಕ್ಸ್ ಸಿಮ್ ಖರೀದಿಸಿ ಹೋದರೆ ಥಾಯ್ಲೆಂಡ್ ತಲುಪಿದ ತಕ್ಷಣ ಎಕ್ಟಿವೇಟ್ ಆಗುತ್ತದೆ.

ಅಲ್ಲಿಯೂ ಕೂಡಾ ಏರ್ ಪೋರ್ಟ್ ಅಲ್ಲಿ ಲೋಕಲ್ ಸಿಮ್ ಪಡೆಯಬಹುದಾದರೂ ಎಕ್ಟಿವೇಟ್ ಆಗಲು ಸಮಯ ತಗುಲುತ್ತದೆ.

೭. ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಅಥವಾ ಕೋವಿಡ್ ಪರೀಕ್ಷೆ ರಿಸಲ್ಟ್

ಥಾಯ್ಲೆಂಡ್ ಗೆ ಹೋಗಲು ಕೊವಿನ್ ತಾಣದಿಂದ ಡೌನ್ ಲೋಡ್ ಮಾಡಿದ ವ್ಯಾಕ್ಸೀನ್ ಸರ್ಟಿಫಿಕೇಟ್ ಬೇಕು. ವ್ಯಾಕ್ಸೀನ್ ಇಲ್ಲದಿದ್ದರೆ ಪ್ರಯಾಣದ ೭೨ ಗಂಟೆಯ ಒಳಗೆ ಪಡೆದ ಆರ್ ಟಿ ಪಿಸಿಆರ್ ಕೋವಿಡ್ ಟೆಸ್ಟ್ ರಿಸಲ್ಟ್ ಬೇಕು. ಪಾಲಕರಿಗೆ ವ್ಯಾಕ್ಸೀನ್ ಆಗಿದ್ದು ಸರ್ಟಿಫಿಕೇಟ್ ಇದ್ದರೆ ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ  ಮಕ್ಕಳಿಗೆ ಕೋವಿಡ್ ಪರೀಕ್ಷೆ ಬೇಕಿಲ್ಲ. ಇಲ್ಲಾಂದ್ರೆ ಬೇಕು. ಈ ನಿಯಮ ಎಲ್ಲ ಪ್ರತಿ ತಿಂಗಳೂ ಬದಲಾಗುತ್ತಾ ಇರುತ್ತೆ. ಒಮ್ಮೆ ಥಾಯ್ ವೆಬ್ ತಾಣದಲ್ಲಿ ಚೆಕ್ ಮಾಡಿ.

8. ಇಂಟರ್ ನ್ಯಾಶನಲ್ ಟ್ರಾವೆಲ್ ಇನ್ಶ್ಯುರನ್ಸ್ (ವಿಮೆ)

ಥಾಯ್ಲೆಂಡ್ ನಲ್ಲಿ ಪ್ರವಾಸದಲ್ಲಿದ್ದಾಗ ಎದುರಾಗುವ ಆಕಸ್ಮಿಕ ಖರ್ಚುಗಳಿಗೆ ಒಂದು ವಿಮೆ ಇದ್ದರೆ ಒಳ್ಳೆಯದು. ನೆನಪಿಡಿ ವಿದೇಶಗಳಲ್ಲಿ ಮೆಡಿಕಲ್ ಖರ್ಚುಗಳು ಭಾರತಕ್ಕಿಂತ ಜಾಸ್ತಿ. ಆದರೆ ಎಮರ್ಜೆನ್ಸಿ ಸಮಯದಲ್ಲಿ ಎಷ್ಟೇ ಹಣ ಆದರೂ ಅಲ್ಲೇ ಟ್ರೀಟ್ ಮೆಂಟ್ ತಗೋಬೇಕು ಅಲ್ವಾ?

ಅಕಸ್ಮಾತ್ ಯಾವುದೇ ರೀತಿಯ ಆಪತ್ಕಾಲದಲ್ಲಿ ಆರ್ಥಿಕ ಆಘಾತ ತಡೆಯುವ ಶಕ್ತಿ ಇದ್ದರೆ ವಿಮೆ ಇಲ್ಲದಿದ್ದರೂ ನಡೆದೀತು.

ಮುಖ್ಯವಾಗಿ ಈ ಮುಂದಿನ ಸಂದರ್ಭಗಳಲ್ಲಿ ಈ ವಿಮೆ ಉಪಯುಕ್ತ.

  • ವಿಮಾನ ತಡ / ಕ್ಯಾನ್ಸೆಲ್ ಆಗುವದು
  • ಬ್ಯಾಗೇಜ್ ತಡ / ಕಾಣೆ ಆಗುವದು
  • ಆರೋಗ್ಯ ಸಮಸ್ಯೆಗಳ ಚಿಕಿತ್ಸೆ, ಎಮರ್ಜೆನ್ಸಿ ಆಪರೇಶನ್
  • ಅಪಘಾತ (ಎಕ್ಸಿಡೆಂಟ್)

ನೀವು ಈ ಮುಂದಿನ ತಾಣದಲ್ಲಿ  ಇಂಟರ್ನ್ಯಾಶನಲ್ ವಿಮೆಗಳನ್ನು ಹುಡುಕಬಹುದು. ಪಾಲಿಸಿ ಬಜಾರ್ ಅಂತರಾಷ್ಟ್ರೀಯ ಪ್ರವಾಸ ವಿಮೆ

ಕೊನೆಯ ಮಾತು

ಇವಿಷ್ಟು ನಿಮ್ಮ ಬಳಿ ಇರಲೇ ಬೇಕಾಗಿದ್ದು, ಇನ್ನು ಸಾಮಾನ್ಯವಾಗಿ ಏನೇನು ಒಯ್ಯಬೇಕು ಅನ್ನುವದು ಮುಂಬರುವ ಭಾಗದಲ್ಲಿ ತಿಳಿಸುತ್ತೇನೆ. ಧನ್ಯವಾದಗಳು.


ಓಲಾ ಉಬರ್ ಕ್ಯಾಬ್ / ಆಟೋ ಬೆಲೆ ಮಾಮೂಲಿಗಿಂತ ಜಾಸ್ತಿ ಯಾಕೆ?


ಓಲಾ ಉಬರ್ ಕ್ಯಾಬ್ / ಆಟೋ ಬೆಲೆ ಸಾಮಾನ್ಯ ಆಟೋ / ಕ್ಯಾಬ್ ಗಿಂತ ಜಾಸ್ತಿ ಯಾಕೆ? 

ಬನ್ನಿ ಈ ಲೇಖನದಲ್ಲಿ ವಿವರವಾಗಿ ಚರ್ಚೆ ಮಾಡೋಣ.

ಇತ್ತೀಚೆಗೆ ಓಲಾ / ಉಬರ್ ಗಳು ತಮ್ಮ ಪ್ಲಾಟ್ ಫಾರ್ಮ್ ಬಳಸಿದ ಸೇವೆಯ ಚಾರ್ಜ್ ಅನ್ನು ಪ್ರತ್ಯೇಕವಾಗಿ ಗ್ರಾಹಕರಿಗೆ ಬಿಲ್ ಅಲ್ಲಿ ತೋರಿಸಲಾಗುತ್ತಿದೆ. ಇದು ಮೋಸವೇ? ಸುಲಿಗೆಯೇ? ಬನ್ನಿ ನೋಡೋಣ.

ಒಂದೇ ಮಾತಲ್ಲಿ ಹೇಳುವದಾದರೆ ಪೂರ್ತಿ ಅಲ್ಲ. ಯಾಕೆ? 

ನಾವು ಓಲಾ, ಉಬರ್, ರೆಪಿಡೋ ಬಳಸುವಾಗ ಎರಡು ಸೇವೆಯನ್ನು ಬಳಸುತ್ತಿರುತ್ತೇವೆ. 

  1. ಆಟೋ / ಕ್ಯಾಬ್ ನ ಮೀಟರ್ ಆಧಾರಿತ ಸೇವೆ.
  2. ಓಲಾ / ಉಬರ್ ಕಂಪನಿಗಳ ಏಪ್ ಸೇವೆ.
ಆ ಎರಡು ಸೇವೆಗೆ ಪ್ರತ್ಯೇಕ ಚಾರ್ಜ್ ಇದೆ. ಅಷ್ಟೇ ಅಲ್ಲ ಚಾಲಕ ಮೊಬೈಲ್ / ಇಂಟರ್ನೆಟ್ ಗೆ ಹಣ ಖರ್ಚು ಮಾಡುತ್ತಾ ಇರಬೇಕು.

ಒಂದು ಆಟೋ / ಕ್ಯಾಬ್ ನ ಮೀಟರ್ ಆಧಾರಿತ ಸೇವೆ. ಏಕೆಂದರೆ ಆಟೋ / ಕ್ಯಾಬ್ ಚಾಲಕ ತಾನು ಎಷ್ಟು ದೂರ ಗಾಡಿ ಓಡಿಸಿದ್ದೇನೋ ಅಷ್ಟಕ್ಕೆ ಮೀಟರ್ ಬೆಲೆ ಅಪೇಕ್ಷಿಸುತ್ತಿರುತ್ತಾನೆ. 

ಇನ್ನೊಂದು ಈ ಕಂಪನಿಗಳ ಏಪ್ ಸೇವೆ. ಆಟೋ/ ಕ್ಯಾಬ್ ಚಾಲಕನಿಗೆ ನಮ್ಮ ಅಗತ್ಯ ತಿಳಿಸಿ, ಅವರಿಗೆ ನಾವಿರುವ ಜಾಗ ತೋರಿಸಿ ಕರೆತಂದು ಅಲ್ಲಿಂದ ನಾವು ಹೋಗಬೇಕಾದ ಕಡೆ ದಾರಿ ತೋರಿಸಿ ಒಯ್ದು ನಮಗೆ ಹಣ ಸಂದಾಯದ ಸೌಲಭ್ಯ, ವಿಮೆ ಸೌಲಭ್ಯ ಹೀಗೆ ನೀಡುವದು ಓಲಾ / ಉಬರ್ ಮಾಡುತ್ತವೆ. ಇದಕ್ಕೆ ಪೂರ್ತಿ ಕಂಪ್ಯೂಟರ್ ತಂತ್ರಜ್ಞಾನ ಬಳಕೆ ಆಗುತ್ತದೆ. ಇನ್ನು ಏನಾದರೂ ತಾಂತ್ರಿಕ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರ ನೀಡುತ್ತವೆ. ಇವೆಲ್ಲಕ್ಕೆ ಬೇರೆ ಖರ್ಚಿದೆ.

ನಿಜ ಕೆಲವರಿಗೆ ಅನ್ನಿಸಬಹುದು ಅದು ನಮ್ಮ ಫೋನ್ ಅಲ್ಲಿರುವ ಎಪ್ ಮಾಡುತ್ತದಲ್ಲ ಎಂದು. ಖಂಡಿತ ಅಲ್ಲ. ಆ ಎಪ್ ಹಿಂದೆ ದೂರದಿಂದ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಸಿ ನಮ್ಮ ಎಪ್ ಹಾಗೂ ಚಾಲಕನ ಎಪ್ ನಿಂದ ಮಾಹಿತಿ ಪಡೆದು ಸಂವಹನ ಮಾಡುವ ಕಂಪ್ಯೂಟರ್ ಸರ್ವರ್ ತಂತ್ರಜ್ಞಾನ ಇರುತ್ತದೆ.

ಆ ತಂತ್ರಜ್ಞಾನ ನಾವು ಎಪ್ ಓಪನ್ ಮಾಡಿ ಬುಕಿಂಗ್ ಆರಂಭದಿಂದ ಹಣ ಸಂದಾಯ ಮಾಡೀ ಟ್ರಿಪ್ ಮುಗಿಸುವವರೆಗೆ ಕೆಲಸ ಮಾಡುತ್ತಲೇ ಇರುತ್ತದೆ! ಇದರ ನಿರ್ಮಾಣ ಹಾಗೂ ನಿರ್ವಹಣೆಗೆ ವಿಪರೀತ ಖರ್ಚಾಗುತ್ತದೆ.

ಇದರ ಜೊತೆಗೆ ಗೂಗಲ್ ಮ್ಯಾಪ್ ನಂತಹ ಕಂಪನಿಗಳು ತಮ್ಮ ಮ್ಯಾಪ್ ಬಳಸಿದ್ದಕ್ಕೆ ಓಲಾ/ಉಬರ್ ಕಂಪನಿಗಳಿಗೆ ಹಣ ಚಾರ್ಜ್ ಮಾಡುತ್ತವೆ! ಗೂಗಲ್ ಮ್ಯಾಪ್ ನಮ್ಮಂತಹ ಗ್ರಾಹಕರು ಬಳಸಿದಾಗ ಉಚಿತ. ಕಂಪನಿಗಳು ಬಳಸಿದಾಗ ಬೇರೆ ಉಚಿತ ಸೇವೆಯ ಖರ್ಚು ಸೇರಿಸಿ ಚಾರ್ಜ್ ಮಾಡಲಾಗುತ್ತದೆ.

ಇನ್ನು ಚಾಲಕ ಕೂಡಾ ಮೊಬೈಲ್ / ಇಂಟರನೆಟ್ / ಕಂಪನಿ ಚಾರ್ಜ್ ಎಲ್ಲಾ ಎಕ್ಸ್ಟ್ರಾ ಕೊಡಬೇಕು.

ಆ ಸೇವೆಗೆ ಗ್ರಾಹಕನೋ ಅಥವಾ ಚಾಲಕನೋ ಅಥವಾ ಇಬ್ಬರೂ ತಕ್ಕ ಬೆಲೆ ತೆರಲೇ ಬೇಕು. ಅಲ್ವಾ?  ಬನ್ನಿ ಈ ವಿಷಯದ ಬಗ್ಗೆ ವಿವರವಾಗಿ ಚರ್ಚೆ ಮಾಡೋಣ. ಈ ಲೇಖನ ಪೂರ್ತಿ ಓದಿ.

ಓಲಾ / ಉಬರ್ ಸೇವೆ ಬರುವದಕ್ಕಿಂತ ಮುಂಚಿನ ಸಮಸ್ಯೆಗಳು

ಒಂದು ವ್ಯವಸ್ಥೆಯ ಅನುಕೂಲ ತಿಳಿಯಲು ಅದೂ ಇಲ್ಲದಿದ್ದಾಗ ಹೇಗಿತ್ತು ಅನ್ನುವದನ್ನು ಅರಿಯಬೇಕು.

ಓಲಾ / ಉಬರ್ ಬರುವದಕ್ಕಿಂತ ಮುಂಚೆ ನನ್ನಂತಹ ಗ್ರಾಹಕರಿಗೆ ಹಾಗೂ ಕ್ಯಾಬ್/ಆಟೋ ಚಾಲಕರಿಗೂ ಸಹ ಹಲವು ಸಮಸ್ಯೆಗಳಿದ್ದವು. ಆ ೧೪ ಸಮಸ್ಯೆಗಳು ಯಾವವು? ಬನ್ನಿ ನೋಡೋಣ.

೧. ಗ್ರಾಹಕರಿಗೆ ಆಟೋ/ಕ್ಯಾಬ್ ಹುಡುಕುವ ಕಷ್ಟ

ಮುಖ್ಯ ರಸ್ತೆಯಿಂದ ಮನೆ ದೂರ ಇದ್ದರೆ ಕಿಮಿಗಟ್ಟಲೆ ಲಗೇಜ್ ಎತ್ತಿಕೊಂಡು ನಡೆದುಕೊಂಡು ಬಂದು ಆಟೋ/ಕ್ಯಾಬ್ ಹುಡುಕ ಬೇಕಿತ್ತು. ಇಲ್ಲಾಂದ್ರೆ ಮನೆಯವರು ಯಾರಾದ್ರೂ ಒಬ್ಬರಾದ್ರೂ ಬಂದು ಮನೆಯವರೆಗೆ ಗಾಡಿ ಕರೆತರಬೇಕಿತ್ತು.

ಹೆಚ್ಚಿನವರು ನಾವು ಹೇಳಿದ ಜಾಗಕ್ಕೆ ಬರುತ್ತಿರಲಿಲ್ಲ.  ಕೆಲವರು ಡ್ಯೂಟಿ ಮುಗಿಸಿ ಮನೆಗೆ ಹೋಗುವವರು ಬೇರೆ ದಿಕ್ಕಿಗೆ ಬರಲ್ಲ. ಅದರಲ್ಲಿ ತಪ್ಪೇನಿಲ್ಲ. ಆದರೆ ಕೆಲವು ರಿಮೋಟ್ ಜಾಗಕ್ಕೆ ವಾಪಸ್ ಡ್ಯೂಟಿ ಸಿಗಲ್ಲ ಎಂದು ಹೆಚ್ಚಿನವರು ಬರುತ್ತಿರಲಿಲ್ಲ. ಅಥವಾ ರಿಟರ್ನ್ ಜರ್ನಿಗೂ ಡಬಲ್ ಹಣ ಸಂದಾಯ ಮಾಡ ಬೇಕಿತ್ತು.

ಇನ್ನು ಪರಿಚಿತರ ನಂಬರ್ ಇಟ್ಟು ಕೊಂಡರೂ ಅನೇಕ ಬಾರಿ ಅವರು ಬೇರೆ ಕಡೆಗೆ ಡ್ಯೂಟಿ ಹೋಗಿದ್ದರಿಂದ ಸಿಗುತ್ತಿರಲಿಲ್ಲ. ಅಥವಾ ಮುಂಗಡವಾಗಿ ಹೇಳಿದರೂ ಚಾಲಕರು ಕೂಡಾ ಅನವಶ್ಯಕವಾಗಿ ಕಾಯಬೇಕಿತ್ತು.

೨. ಬೇರೆ ಸಿಟಿಗೆ ಹೋದಾಗ ಭಾಷೆ ಬರದೇ ಕಷ್ಟ

ಹೊಸತಾಗಿ ಬೇರೆ ಸಿಟಿಗೆ ಹೋದಾಗ ಕೂಡಾ ಅಲ್ಲಿ ಭಾಷೆ ಅರಿತು ಎಲ್ಲಿಗೆ ಹೋಗಬೇಕು ಹೇಳುವದು, ಚೌಕಾಶಿ ಮಾಡುವದರಲ್ಲೇ ಸಮಯ ಕಳೆಯುತ್ತಿತ್ತು. ಜಾಸ್ತಿ ಹಣ ಕೂಡಾ ಕೊಡಬೇಕಾಗಿತ್ತು.

೩. ಅನವಶ್ಯಕ ಸಮಯ ವ್ಯರ್ಥ

ಕ್ಯಾಬ್ / ಆಟೋ ಹುಡುಕುವದರಲ್ಲೇ ಬಹುಕಾಲ ಕಳೆಯುತ್ತಿತ್ತು. ಟೈಮ್ ಈಸ್ ಮನಿ! ಅಂದ್ರೆ ಸಮಯವೇ ಹಣ. ಸಮಯ ಉಳಿತಾಯ ಆದರೆ ನಾವು ಅದೇ ಸಮಯವನ್ನು ಉಪಯುಕ್ತ ಬೇರೆ ಕೆಲಸಗಳಲ್ಲಿ ಕಳೆಯಬಹುದು.

೪. ಮೀಟರ್ ಹಾಕಲ್ಲ ಹೇಳಿದ್ದೇ ಬೆಲೆ

ಆಟೋ / ಟ್ಯಾಕ್ಸಿಗಳಿಗೆ ಮೀಟರ್ ಇದೆ ಅಲ್ವಾ. ಅನೇಕ ಬಾರಿ ಮೀಟರ್ ಹಾಕದೇ ದುಪ್ಪಟ್ಟು ಹಣ ಕೇಳುತ್ತಿದ್ದರು.

ಇದೇ ಅನುಭವ ಮೆಜೆಸ್ಟಿಕ್ ಅಲ್ಲಿ ಊರಿನಿಂದ ಬಸ್ ಅಲ್ಲಿ ಬಂದಾಗ ಬೆಳಿಗ್ಗೆ, ಆಫೀಸಿನಿಂದ ಹೋಗುವಾಗ ಕೂಡಾ ಆಗಿದೆ. ಹೇಳಿದ್ದೆ ಬೆಲೆ. ಮೀಟರ್ ಬರೀ ಡೆಕೋರೇಶನ್ ಗೆ ಮಾತ್ರ. ಕಿಮಿಗೂ ಕೇಳುವ ಬೆಲೆಗೂ ಯಾವುದೇ ಸಂಬಂಧ ಇಲ್ಲ. ಇಷ್ಟು ಕೊಟ್ಟರೆ ಬರ್ತಿನಿ ಅಷ್ಟೇ ಅನ್ನೋ ಮನೋಭಾವ.

ಮಳೆ ಬಂದಾಗ, ಐಟಿ ಕಂಪೆನಿ ಇರುವಲ್ಲಿ, ಬೆಳಂಬೆಳಿಗ್ಗೆ ಹೀಗೆ ಎಲ್ಲ ಕಡೆ ಆಟೋ ಬೆಲೆ ಕೇಳಲಾಗದು. ಯಾರೂ ನಿಗದಿಪಡಿಸಿದ ಕಿಮಿ ಲೆಕ್ಕಾಚಾರಕ್ಕೆ ಬರುವದೇ ಇಲ್ಲ.

ಓಲಾ / ಉಬರ್ ಅಂತಹ ಎಪ್ ಮುಂಚೆ ಆತುರ ಇರುವದರಿಂದ ಹೇಳಿದ ಹಣ ತೆತ್ತು ಹೋಗುವ ಅನಿವಾರ್ಯತೆ ಗ್ರಾಹಕರಿಗೆ ಇತ್ತು. ಈಗ ಪರ್ಯಾಯ ಇದೆ.

೫. ಮೀಟರ್ ಅಲ್ಲಿ ಮೋಸ

ಇನ್ನು ಮೀಟರ್ ಮೋಸದ ಬಗ್ಗೆ ನಾನು ಮಾತನಾಡದಿರುವದು ಲೇಸು. ಒಂದೇ ಜಾಗಕ್ಕೆ ಬೇರೆ ಬೇರೆ ಗಾಡಿಯಲ್ಲಿ ಬಿಲ್ ಬೇರೆ ಬರುತ್ತಿದ್ದು ಅಲ್ಲಲ್ಲಿ ಮೀಟರ್ ಜಂಪ್ ಆಗುವದು, ಬದಲಾಯಿಸಿದ ಮೀಟರ್ ನಿಂದ ನಮ್ಮಂತಹ ಗ್ರಾಹಕರಿಗೆ ಆದ ಮೋಸಕ್ಕೆ ಲೆಕ್ಕ ಇಲ್ಲ.

೬. ನೇರವಾಗಿ ಹೋಗದೇ ಸುತ್ತು ಬಳಸಿ ಹೋಗುವದು

ಅಕಸ್ಮಾತ್ ನೀವು ಹೋಗುವ ಜಾಗಕ್ಕೆ ದಾರಿ ಗೊತ್ತಿಲ್ಲದಿದ್ದರೆ ಕಥೆ ಮುಗಿಯಿತು. ಬೆಂಗಳೂರಿಗೆ ಹೊಸಬರಾದರೆ ಹೋಗುವ ಜಾಗಕ್ಕೆ ನೇರವಾಗಿ ಹೋಗುವ ಬದಲು ಸುತ್ತು ಬಳಸಿ ಹೋಗಿ ಜಾಸ್ತಿ ಮೀಟರ್  ಓಡಿಸಿ ಕೂಡಾ ಕೆಲವರು ಮೋಸ ಮಾಡುತ್ತಿದ್ದರು.

೭. ಏನನ್ನಾದ್ರು ಮರೆತರೆ ಆಟೋ/ಕ್ಯಾಬ್ ಗೊತ್ತಿಲ್ಲದಿರುವದು

ಅಪ್ಪಿ ತಪ್ಪಿ ಯಾವುದಾದ್ರೂ ವಸ್ತು ಬಿಟ್ಟು ಬಿಟ್ಟಿದೀರಾ ಆಗ ಗ್ರಾಹಕರಿಗೂ ಆಟೋ / ಕ್ಯಾಬ್ ನಂಬರ್ ಗೊತ್ತಿಲ್ಲ. ಚಾಲಕನಿಗೂ ಗ್ರಾಹಕರ ವಿವರ ಇಲ್ಲ. ಸಂಪರ್ಕ ಸ್ವಲ್ಪ ಆಗ ಕಷ್ಟ ಇತ್ತು.

೮. ಡ್ಯೂಟಿ ಬೇಕಾದ್ರೆ ಕಮಿಶನ್ ಕೊಡಬೇಕು

ನೆನಪಿಡಿ ಬರಿ ಗ್ರಾಹಕರಿಗೆ ಅಷ್ಟೇ ಅಲ್ಲ ಚಾಲಕರಿಗೂ ಸಮಸ್ಯೆ ಇತ್ತು. ಡ್ಯೂಟಿ ಬೇಕಿದ್ದರೆ ಟ್ರಾವೆಲ್ ಏಜೆಂಟ್ ಹೇಳಿದ ಕಮಿಶನ್ ಕೊಡಬೇಕಿತ್ತು. ಇಲ್ಲಾಂದ್ರೆ ಯಾವುದಾದ್ರೂ ಕ್ಯಾಬ್ ಕಂಪೆನಿಗಳಿಗೆ ಅವರು ನೀಡುವ ಸಂಬಳಕ್ಕೆ ದುಡಿಯಬೇಕಿತ್ತು. ತನ್ನದೇ ಆದ ಬ್ಯುಸಿನೆಸ್ ನಡೆಸುವ ಸ್ವಾತಂತ್ರ್ಯ ತುಂಬಾ ಇರಲಿಲ್ಲ.

೯. ಗ್ರಾಹಕರನ್ನು ಹುಡುಕುವ ಕಷ್ಟ

ಪಕ್ಕದ ರೋಡಲ್ಲೇ ಗ್ರಾಹಕ ಇದ್ದರೂ ಎಲ್ಲ ಕಡೆ ಖಾಲಿ ಆಟೋ/ಕ್ಯಾಬ್ ಅಲ್ಲಿ ತಿರುಗಾಡುತ್ತಾ ಗ್ರಾಹಕರಿಗಾಗಿ ಅಲೆದಾಡ ಬೇಕಿತ್ತು. ಒಂದೇ ಬಸ್ ಸ್ಟ್ಯಾಂಡ್ ಹತ್ರ ಹೋಗಿ ಆಟೋ ಬೇಕಾ ಎಂದು ಕೇಳಬೇಕಿತ್ತು. ಇಲ್ಲಾ ಕ್ಯಾಬ್ / ಟ್ರಾವೆಲ್ ಕಂಪೆನಿಗಳು ಡ್ಯೂಟಿ ಕೊಡುವವರೆಗೂ ಚಾತಕ ಪಕ್ಷಿಯಂತೆ ಕಾಯಬೇಕಿತ್ತು.

೧೦. ದಾರಿ ಹುಡುಕುವ ಕಷ್ಟ

ಗ್ರಾಹಕರಿಗೆ ಎಲ್ಲಿ ಹೋಗಬೇಕೋ ಆ ದಾರಿ ಹುಡುಕುವದು ಹೊಸ ಚಾಲಕರಿಗೆ ತುಂಬಾ ಕಷ್ಟದ ಕೆಲಸ ಆಗಿತ್ತು. ದಾರಿಯಲ್ಲಿ ನಿಲ್ಲಿಸುತ್ತಾ ಕೇಳುತ್ತಾ ಹೋಗ ಬೇಕಿತ್ತು. ಕೆಲವೊಮ್ಮೆ ಆ ಜಾಗದ ಹತ್ತಿರ ಹೋದರೂ ಗ್ರಾಹಕರ ಮನೆ / ಅಂಗಡಿ / ಜಾಗ ಹುಡುಕುವ ಸಮಸ್ಯೆ ಇತ್ತು. ಅಲ್ಲಿ ಅಲೆದಾಡುತ್ತಾ ಸಮಯವೂ ವ್ಯರ್ಥ ಆಗುತ್ತಿತ್ತು.

೧೧. ಚಿಲ್ಲರೆ ಸಮಸ್ಯೆ

ಗ್ರಾಹಕರ ಬಳಿ ಚಿಲ್ಲರೆ ಇರುತ್ತಿರಲಿಲ್ಲ. ದೊಡ್ಡ ನೋಟು ಕೊಟ್ಟಾಗ ಚಾಲಕರು ಅಂಗಡಿ ಅಂಗಡಿ ಅಲೆಯುತ್ತಾ ಅದಕ್ಕೆ ಚೇಂಜ್ ಪಡೆದು ಚಿಲ್ಲರೆ ವಾಪಸ್ ನೀಡಲು ಹರ ಸಾಹಸ ಮಾಡಬೇಕಿತ್ತು. ಸಮಯವೂ ವ್ಯರ್ಥ, ಕೆಲವೊಮ್ಮೆ ಚಾಲಕರು ಕಡಿಮೆ ಹಣ ಪಡೆಯುವದೋ ಅಥವಾ ಗ್ರಾಹಕರು ಕಡಿಮೆ ಚೇಂಜ್ ಪಡೆಯುವದು ಆಗುತ್ತಿತ್ತು.

೧೨. ಗ್ರಾಹಕರ ಬಳಿ ಹಣ ಇರದ ಸಮಸ್ಯೆ

ಎಷ್ಟೋ ಬಾರಿ ಗ್ರಾಹಕರಿಗೆ ಕೈಯಲ್ಲಿ ಹಣ ಇಲ್ಲದೇ ಎಟಿಎಂ ಹುಡುಕುತ್ತಾ ಓಡಾಡುವ ಸಮಸ್ಯೆ. ಇರುವ ಹಣಕ್ಕಿಂತ ಮೀಟರ್ ಜಾಸ್ತಿ ಆಗಿ ಕೊನೆಯ ಕ್ಷಣಕ್ಕೆ ಏಟಿಎಂ ಹುಡುಕುವ ಗಡಿಬಿಡಿ.

೧೩. ಸುರಕ್ಷತೆಯ ಸಮಸ್ಯೆ

ನಡು ರಾತ್ರಿಯಲ್ಲಿ ಒಂಟಿಯಾಗಿ ಹೋಗುವಾಗ ಸ್ವಲ್ಪ ಭಯ ಅಳುಕು ಇದ್ದೇ ಇರುತಿತ್ತು.

೧೪. ನಡುರಸ್ತೆಯಲ್ಲಿ ವಾಹನ ಹಾಳಾದಾಗ / ಪೆಟ್ರೋಲ್ ಖಾಲಿ ಆದಾಗ

ನಡುರಸ್ತೆಯಲ್ಲಿ ಹೋಗುವಾಗ ವಾಹನ ಹಾಳಾದಾಗ ಅಥವಾ ಇಂಧನ ಖಾಲಿ ಆದಾಗ ಚಾಲಕರಿಗೆ ತಮ್ಮ ವಾಹನ ಗ್ಯಾರೇಜಿಗೆ ಒಯ್ಯುವ  ಅಥವಾ ಇಂಧನ ತರುವ ಅನಿವಾರ್ಯತೆ.
ಆದರೆ ಎಲ್ಲೋ ಹೋಗುವ ಅವಸರದಲ್ಲಿದ್ದ ಗ್ರಾಹಕರಿಗೆ ಹೊಸ ಗಾಡಿ ಬಾಡಿಗೆಗೆ ಮಧ್ಯ ದಾರಿಯಲ್ಲಿ ಲಗ್ಗೇಜ್ ಜೊತೆಗೆ ಹುಡುಕುವ ಸಂಕಟ. ಅದೂ ಆ ವಾಹನ ಅದೇ ದಾರಿಯಲ್ಲಿ ಬರಬೇಕು! ಖಾಲಿ ಇರಬೇಕು! ಕಷ್ಟ!! ಕಷ್ಟ!!

ಗ್ರಾಹಕರಿಗೆ / ಚಾಲಕರಿಗೆ ಓಲಾ / ಉಬರ್ ನಿಂದ ಏನು ಲಾಭ?


ಈ ಓಲಾ / ಉಬರ್ ನಿಂದ ನಮ್ಮಂತಹ ಗ್ರಾಹಕರಿಗೆ ಹಾಗೂ ಚಾಲಕರಿಗೆ ಕೂಡಾ ಏನು ಲಾಭ ನೋಡೋಣ.

೧. ನಾವಿರುವ ಜಾಗಕ್ಕೇ / ಮನೆಗೇ ಬರುವ ಗಾಡಿ

ಇಂದು ಓಲಾ / ಉಬರ್ / ರೆಪಿಡೋ ಮೊದಲಾದ ಆಪ್ ಮುಖಾಂತರ ನಮ್ಮ ಮನೆಗೆ ಕ್ಯಾಬ್ / ಆಟೋ / ಬೈಕ್ ಟ್ಯಾಕ್ಸಿ ಬುಕ್ ಮಾಡಬಹುದು. ತುಂಬಾ ಜಾಸ್ತಿ ಡಿಮ್ಯಾಂಡ್ ಇದ್ದಾಗ ಸಮಸ್ಯೆ ಇರುತ್ತೆ ಆದರೆ ಸಮಸ್ಯೆಗಳು ಎಲ್ಲಿಲ್ಲ ಹೇಳಿ.

ಅಷ್ಟೇ ಅಲ್ಲ ಮುಂಚೆ ನಾನು ಕ್ಯಾಬ್ ಬಳಸುತ್ತಿದ್ದುದು ಕೇವಲ ದೂರದ ಪ್ರಯಾಣಕ್ಕೆ ಮಾತ್ರ. ಯಾಕೆಂದರೆ ಮೇರು ಕ್ಯಾಬ್ ನಂತಹ ಕಂಪೆನಿಗಳಿಗೆ ಫೋನ್ ಮಾಡಿ ಏರ್ ಪೋರ್ಟ್ ಇತ್ಯಾದಿ ಹೋಗುವದಕ್ಕೆ ೨ ದಿನ ಮೊದಲೆ ಕಾದಿರಿಸ ಬೇಕಾಗಿತ್ತು. ಆಗ ಓಲಾ ಶೇರ್ ಇತ್ಯಾದಿ ಆಯ್ಕೆ ಇರಲಿಲ್ಲ. ಅಷ್ಟೇ ಅಲ್ಲ ಕ್ಯಾಬ್ ಡ್ರೈವರ್ ಟ್ರಿಪ್ ಮುಗಿದ ಮೇಲೆ ಗ್ರಾಹಕ ಕಾದಿರಿಸಿದ ಬುಕಿಂಗ್ ಸೆಂಟರ್ ಗೆ ನಿಗದಿತ ಕಮಿಶನ್ ಹಣ ಕೊಡಬೇಕಿತ್ತು.

ಓಲಾ ಉಬರ್ ಬಂದ ಮೇಲೆ ನಡುರಸ್ತೆಯಲ್ಲೂ ಕ್ಯಾಬ್ ಅಥವಾ ಆಟೋ ಅಥವಾ ಬೈಕ್ ಟ್ಯಾಕ್ಸಿ ಎಲ್ಲಿದೆ ಎಂಬುದು ಹುಡುಕುವದು ಸುಲಭವಾಗಿದೆ. ಹಲವಾರು ಆಟೋಗಳಿಗೆ ಬರ್ತೀರಾ ಬರ್ತೀರಾ ಎಂದು ಕೇಳಬೇಕಿಲ್ಲ.

ಚಾಲಕರಿಗೂ ಊರೆಲ್ಲಾ ಓಡಾಡುತ್ತಾ ಕೇಳುತ್ತಾ ತಿರುಗಾಡಬೇಕಿಲ್ಲ. ಬದಲಾಗಿ ಯಾವ ಕಡೆ ಡಿಮ್ಯಾಂಡ್ ಇದೆಯೊ ಹತ್ತಿರ ಇದ್ದರೆ ಸಾಕು ಡ್ಯೂಟಿ ಇದ್ದಲ್ಲೇ ಬರುತ್ತೆ. ಗ್ರಾಹಕ ಇರುವ ಜಾಗಕ್ಕೆ ನಿಖರವಾಗಿ ತಲುಪಬಹುದು.

೨. ಸಮಯ ಉಳಿತಾಯ

ಓಲಾ / ಉಬರ್ ಎಪ್ ಗಳು ಹತ್ತಿರದಲ್ಲಿರುವ ಎಲ್ಲ ಆಟೋ ನೋಡಿ ನಮಗೆ ಮ್ಯಾಚ್ ಆಗುವ ಆಟೋಗಳಿಗೆ ಡ್ಯೂಟಿ ಕಳುಹಿಸುವದರಿಂದ ತತಕ್ಷಣ ಕ್ಯಾಬ್ / ಆಟೋ ಚಾಲಕರಿಗೆ ತಿಳಿದು ಇಬ್ಬರಿಗೂ ಅನುಕೂಲ. ಭಾಷೆಯ ಸಮಸ್ಯೆ ಇಲ್ಲ. ಎಪ್ ಅಲ್ಲಿ ನಾವು ಎಲ್ಲಿಂದ ಎಲ್ಲಿಗೆ ಹೋಗಬೇಕು ಅನ್ನುವದನ್ನು ಹೇಳಿದ್ದು ಸುಮಾರು ಎಷ್ಟು ಹಣ ಎಂಬುದು ಕೂಡಾ ನಮಗೆ ಮೊದಲೇ ಗೊತ್ತಿರುತ್ತದೆ.

ಮೂರು ಪಟ್ಟು ಹಣ ಕೇಳಿರುವ ಚಾಲಕನ ಜೊತೆ ಚೌಕಾಶಿ ಮಾಡುತ್ತಾ ಕಾಲಹರಣ ಮಾಡುವ ಸಮಸ್ಯೆ ಇಲ್ಲ.

೩. ಮೀಟರ್ ಇದ್ದೇ ಇರುತ್ತೆ ಅಲ್ಲಿ ಮೋಸ ಇಲ್ಲ

ಅವೆಲ್ಲ ಓಲಾ / ಉಬರ್ ಅಲ್ಲಿ ಇಲ್ಲವೇ ಇಲ್ಲ. ಜಿಪಿಎಸ್ ಮೂಲಕ ಕರಾರುವಕ್ಕಾಗಿ ದೂರ ಲೆಕ್ಕ ಹಾಕಿ ಬಿಲ್ ನೀಡುತ್ತವೆ. ತಾಂತ್ರಿಕ ಸಮಸ್ಯೆಯಿಂದ ಬಿಲ್ಲಿಂಗ್ ತಪ್ಪಾಗುವ ಸಾಧ್ಯತೆ ಇದೆ. ಆದರೆ ಕಂಪನಿಗಳಿಗೆ ದೂರು ನೀಡಿದರೆ ಸರಿಪಡಿಸುತ್ತವೆ. ವಾಹನದಲ್ಲಿ ಮೀಟರ್ ಇರುವದಿಲ್ಲ ಜಿಪಿಎಸ್ ಆಧಾರಿತ. ಟ್ಯಾಂಪರ್ ಮಾಡಲು ಸಾಧ್ಯವಿಲ್ಲ.

೪. ಸರಿಯಾದ ದಾರಿ

ಜಿಪಿಎಸ್ ಸರಿಯಾದ ದಾರಿ ತೋರಿಸುವದರಿಂದ ಚಾಲಕರಿಗೂ ಮಾರ್ಗ ಹುಡುಕುವ ಸಮಸ್ಯೆ ಇಲ್ಲ, ಸುತ್ತಿ ಬಳಸಿ ಹೋದರೆ ಓಲಾ / ಉಬರ್ ಪತ್ತೆ ಹಚ್ಚಿ ಬಿಡುತ್ತಾರೆ.

೫. ಗ್ರಾಹಕ / ಚಾಲಕ ಸಂಪರ್ಕ

ಗ್ರಾಹಕ ಏನಾದರೂ ಮರೆತಿದ್ದರೆ ಮತ್ತೆ ಚಾಲಕನಿಗೆ ಸಂಪರ್ಕ ಮಾಡಬಹುದು.

೬. ಮಧ್ಯವರ್ತಿಗಳ ಸಮಸ್ಯೆ ಇಲ್ಲ

ಗ್ರಾಹಕ / ಚಾಲಕರ ಮಧ್ಯೆ ಕಮಿಶನ್ ಪಡೆಯುವ ಮಧ್ಯವರ್ತಿಗಳಿಲ್ಲ. ಓಲಾ / ಉಬರ್ ತಂತ್ರಜ್ಞಾನಕ್ಕೆ ಸೇವೆಗೆ ಹಣ ನೀಡಬೇಕು ನಿಜ. ಆದರೆ ಅದಕ್ಕೆ ಹೆಚ್ಚಿನ ಸೌಲಭ್ಯ ಸಿಗುತ್ತೆ. ಇದು ಒಂತರಾ ಗ್ರಾಹಕರಿಗೂ ಚಾಲಕರಿಗೂ ವಿನ್ ವಿನ್ ಸಂದರ್ಭ. ಇದಕ್ಕೂ ಮೊದಲು ಟ್ರಾವೆಲ್ ಬುಕಿಂಗ್ ಸೆಂಟರ್ ಗೆ, ಕ್ಯಾಬ್ ಕಂಪನಿಗಳಿಗೆ ಇದರ ಹಲವು ಪಟ್ಟು ಕಮಿಶನ್ ನೀಡಬೇಕಿತ್ತು.

೭. ಚಿಲ್ಲರೆ / ಹಣ ಇರದಿರುವ ಸಮಸ್ಯೆ ಕಡಿಮೆ

ಆನ್ ಲೈನ್ ಹಣ ಸಂದಾಯ, ಆಮೇಲೆ ಹಣ ನೀಡುವ ಸೌಲಭ್ಯ ಚಿಲ್ಲರೆ ಸಮಸ್ಯೆ, ಹಣ ಇಲ್ಲದಾಗ ಎಟಿಎಂ ಹುಡುಕುವ ಸಮಸ್ಯೆ ಕಡಿಮೆ ಮಾಡುತ್ತೆ.

೮. ಸುರಕ್ಷತೆಯ ಸಮಸ್ಯೆ ಕಡಿಮೆ

ಓಲಾ / ಉಬರ್ ನಂತಹ ಕಂಪನಿಗಳಿಗೆ ಚಾಲಕರನ್ನು ಹಿನ್ನೆಲೆ ಪರೀಕ್ಷೆ ಮಾಡಿ ನೊಂದಾಯಿಸುವ ಅವಕಾಶ ಇದೆ. ಚಾಲಕ ಅಥವಾ ಗ್ರಾಹಕ ಕೆಟ್ಟ ವರ್ತನೆ ಮಾಡಿದ ದೂರು ಬಂದಲ್ಲಿ ಅದನ್ನು ಪರಿಶೀಲಿಸಿ ಕಿತ್ತು ಹಾಕುವ ಆಯ್ಕೆ ಇದೆ. ಯಾರು ಯಾರನ್ನು ಎಲ್ಲಿಗೆ ಒಯ್ದರು ಎಂಬ ಮಾಹಿತಿ ಕಂಪನಿಗಳಿಗೆ ಇರುವದರಿಂದ ನಾಳೆ ತನಿಖೆ ಮಾಡಲು ಸಹಾಯಕ.

೯. ಚಾಲಕರಿಗೆ ಜಾಸ್ತಿ ಡ್ಯೂಟಿ

ಒಲಾ / ಉಬರ್ ಆಟೋ / ಕ್ಯಾಬ್ ಹುಡುಕುವದು ಸುಲಭ ಆದ್ದರಿಂದ ಗ್ರಾಹಕರು ಹೆಚ್ಚು ಹೆಚ್ಚು ಬಳಸುತ್ತಾರೆ. ಇದರಿಂದ ಚಾಲಕರಿಗೂ ಕೂಡಾ ಮುಂಚೆಗಿಂತ ಜಾಸ್ತಿ ಕೆಲಸ ಸಿಗುತ್ತೆ. ಅಲ್ಲಿ ಗ್ರಾಹಕರಿಗೆ ಟಿಪ್ಸ್ ಕೊಡುವ ಅನುಕೂಲ ಕೂಡಾ ಇದೆ. ಹಣವಂತರು, ದಾರಾಳಿಗಳು ಕ್ಯಾಬ್ / ಆಟೋ ಸೇವೆ ಇಷ್ಟ ಆದಲ್ಲಿ ಅದನ್ನು ಕೊಡುತ್ತಾರೆ.

ಆರಂಭಿಕ ದಿನಗಳಲ್ಲಿ ಓಲಾ / ಉಬರ್ ನಡುವೆ ಮಾರುಕಟ್ಟೆಗೆ ಸಮರ

ಆರಂಭಿಕ ದಿನಗಳಲ್ಲಿ ಓಲಾ / ಉಬರ್ ಬಂಡವಾಳ ಹೂಡಿ ಕ್ಯಾಬ್ / ಆಟೋ ಚಾಲಕರಿಗೆ ಇನ್ಸೆಂಟಿವ್ / ಸಾಲಕ್ಕೆ ಹೊಸ ಕ್ಯಾಬ್ ಇತ್ಯಾದಿ ನೀಡುತ್ತಿದ್ದವು. ಹಾಗೆಯೆ ಗ್ರಾಹಕರಿಗೂ ಕೂಡಾ ಭಾರಿ ಡಿಸ್ಕೌಂಟ್, ಕ್ಯಾಶ್ ಬ್ಯಾಕ್  ಇತ್ಯಾದಿ ಲಭ್ಯವಿದ್ದವು. ಇವೆಲ್ಲ ಮಾರುಕಟ್ಟೆ ಶೇರ್ ಜಾಸ್ತಿ ಮಾಡಿಕೊಳ್ಳುವ ತಂತ್ರ ಮಾತ್ರ. ಇವೆಲ್ಲ ಯಾವಾಗಲೂ ಇರುತ್ತೆ ಎಂದು ನಂಬಿದ್ದರೆ ಅದು ನಮ್ಮ ಭ್ರಮೆ ಮಾತ್ರ.

ಎಲ್ಲಾ ಕಂಪೆನಿಗಳು ಆರಂಭಿಕ ವರ್ಷಗಳಲ್ಲಿ ಜನರಿಗೆ ಕಡಿಮೆ ಹಣದಲ್ಲಿ ನೀಡಿ ತಮ್ಮ ಸೇವೆಯ ಪರಿಚಯ ಮಾಡಿ ಅದು ಯಾಕೆ ಬೇಕು ಅನ್ನುವದನ್ನು ಮನಗಾಣಿಸಿ ಅದರ ಮೇಲೆ ಅವಲಂಭಿಸುವ ಹಾಗೆ ಮಾಡುತ್ತಾರೆ. ಆಮೇಲೆ ನಿಧಾನವಾಗಿ ತಮ್ಮ ಸೇವೆಗೆ ಚಾರ್ಜ್ ಮಾಡಲು ಆರಂಭಿಸುತ್ತಾರೆ. 

ಆಗ ಕೆಲವರು ಸೇವೆಯನ್ನು ಬಳಸುವದನ್ನು ನಿಲ್ಲಿಸಿದರೂ ಆ ಸೇವೆ ಯಾರಿಗೆ ಅನುಕೂಲವೋ ಅವರು ಬಳಸುವದನ್ನು ಮುಂದುವರಿಸುತ್ತಾರೆ ಎಂಬುದು ಈ ಕಂಪನಿಗಳಿಗೆ ಗೊತ್ತು. 

ಇದು ನಮ್ಮಲ್ಲಿ ಮೊದಲು ೧ರೂ ಗೆ ಪೇಪರ್ ಕೊಟ್ಟು ಆಮೇಲೆ ನಾರ್ಮಲ್ ಬೆಲೆ ಕೇಳುವದಿಲ್ಲವೇ. ಅದೇ ರೀತಿ ಇದು ವ್ಯಾಪಾರಿ ತಂತ್ರ.

ಈಗ ಅವರ ಬೆಲೆ ಸಮರ ಮುಗಿದಿದೆ.

ಓಲಾ / ಉಬರ್ ಕಂಪನಿಗಳಿಗೆ ಖರ್ಚು ಏನಿರುತ್ತೆ?


ನೆನಪಿಡಿ ಓಲಾ / ಉಬರ್ ಸೌಲಭ್ಯ ಸುಖಾಸುಮ್ಮನೆ ಗಾಳಿಯಲ್ಲಿ ಸೃಷ್ಟಿ ಆಗಿಲ್ಲ. ಈ ಕಂಪನಿಗಳು ಸಾಫ್ಟವೇರ್ ನಿರ್ಮಾಣ, ನಿರ್ವಹಣೆ, ಸರ್ವರ್ ನಿರ್ವಹಣೆ, ಗೂಗಲ್ ಮ್ಯಾಪ್ ಲೈಸೆನ್ಸ್, ಕಾಲ್ ಸೆಂಟರ್, ಡ್ರೈವರ್ ರಿಜಿಸ್ಟ್ರೇಶನ್, ಸ್ಮಾರ್ಟ್ ಡಿವೈಸ್ ನೀಡುವಿಕೆ ಹೀಗೆ ಹಲವು ಕಾರ್ಯಗಳಿಗೆ ಹಣ ವ್ಯಯಿಸಿ ನಡೆಸುತ್ತಿವೆ.

ಸಾಫ್ಟವೇರ್ ಇಂಜಿನಿಯರ್ ಗಳು, ಮ್ಯಾನೇಜರ್, ಕಾಲ್ ಸೆಂಟರ್ ಹೀಗೆ ಹಲವು ರೀತಿಯ ಉದ್ಯೋಗಿಗಳು ಸಹ ಇದಕ್ಕೆ ಕೆಲಸ ಮಾಡುತ್ತಾರೆ.

ಇನ್ನು ಪ್ರಯಾಣ ವಿಮೆ / ಹಣ ಪಾವತಿ / ಆಮೇಲೆ ಹಣ ನೀಡುವ ಸೌಲಭ್ಯ ಕೂಡಾ ನೀಡುತ್ತಿವೆ.

ಇವ್ಯಾವುದೂ ಉಚಿತವಾಗಿ ಗ್ರಾಹಕರಿಗೆ / ಚಾಲಕರಿಗೆ ಸಿಗದು ಅದರ ಬೆಲೆ ಯಾರಾದರೂ ತೆರಲೇ ಬೇಕು. 

ಇದಕ್ಕೂ ಮೊದಲು ಮಧ್ಯವರ್ತಿಗಳಿಗೆ ಇಬ್ಬರೂ ಸೇರಿ ಇದಕ್ಕಿಂತ ಜಾಸ್ತಿ ಕಮಿಶನ್ ನೀಡಬೇಕಿತ್ತು. ನಮಗೆ ಮತ್ತೆ ಅದೇ ವ್ಯವಸ್ಥೆ ಬೇಕೇ?

ಇನ್ನು ಯಾರಾದರೂ ಪ್ರತ್ಯೇಕ ಆಪ್ ಇದಕ್ಕೂ ಕಡಿಮೆ ಬೆಲೆಗೆ ನಡೆಸುತ್ತೇನೆ ಎಂದರೆ ಅದಕ್ಕೆ ಮಾರುಕಟ್ಟೆ ಇದೆ. ಅವರಿಗೆ ನನ್ನ ಸಲಹೆ ಏನೆಂದರೆ ದಯವಿಟ್ಟು ನಿಮ್ಮ ಹೊಸ ಎಪ್ / ಸೇವೆ ಹೊರತನ್ನಿ. ಯಾವುದು ಬಳಸಬೇಕು ಅನ್ನುವದನ್ನು ಗ್ರಾಹಕರಿಗೆ ಬಿಟ್ಟು ಬಿಡಿ. ಅಲ್ವಾ?

ಓಲಾ / ಉಬರ್ ಸೇವೆಗೆ ನಾರ್ಮಲ್ ಕ್ಯಾಬ್ ಆಟೋ ಗಿಂತ ಬೆಲೆ ಜಾಸ್ತಿ ಯಾಕೆ?

ರಸ್ತೆಯಲ್ಲಿ ನೇರವಾಗಿ ಸಿಗುವ ಆಟೋ ಗೆ ಯಾವುದೇ ತಂತ್ರಜ್ಞಾನ ಬೇಕಿಲ್ಲ. ಆಟೋ ಹಾಗೂ ಗ್ಯಾಸ್ ಖರ್ಚು ಮಾತ್ರ. ಆದರೆ ಓಲಾ / ಉಬರ್ ವ್ಯವಸ್ಥೆಯಲ್ಲಿ ಗ್ರಾಹಕ, ಚಾಲಕ ಹಾಗೂ ಕಂಪನಿ ಮೂರೂ ಜನರಿಗೂ ಖರ್ಚಿದೆ. ಓಲಾ / ಉಬರ್ ಅಂತಹ ಕಂಪನಿ ಹುಟ್ಟು ಹಾಕಲು ಭಾರಿ ಮಟ್ಟದ ಆರಂಭಿಕ ಬಂಡವಾಳ ಅಷ್ಟೇ ಅಲ್ಲ ನಡೆಸಲು ಕೂಡಾ ಹಣ ಬೇಕು.

ಇಕಾನಾಮಿ ಆಫ್ ಸ್ಕೇಲ್ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸಲು ಓಲಾ/ಉಬರ್ ಗಳು ಆರಂಭಿಕವಾಗಿ ಗ್ರಾಹಕರಿಗೆ / ಚಾಲಕರಿಗೆ ಆಕರ್ಷಿಸಲು ಉಚಿತ ಕೊಡುಗೆ ಮೂಲಕ ನಷ್ಟದಲ್ಲಿ ನಡೆಸಿದರು. ಆದರೆ ಕಾಲ ಕ್ರಮೇಣ ಎಲ್ಲ ಖರ್ಚುಗಳು ಗ್ರಾಹಕ / ಚಾಲಕರ ಮೇಲೇ ಬೀಳಲಿದೆ. ಕೋಟ್ಯಂತರ ಜನ ಪ್ರತಿದಿನ ಬಳಸುವದರಿಂದ ಯಾರಿಗೂ ಹೊರೆ ಎನಿಸದು.

ನೆನಪಿಡಿ ಇಲ್ಲಿಯವರೆಗೆ ಓಲಾ / ಉಬರ್ ಕಂಪನಿಗೆಳು ಗ್ರಾಹಕರನ್ನು ಚಾಲಕರನ್ನು ಸೆಳೆಯಲು ಬೇರೆ ಕಡೆಯಿಂದ ಬಂಡವಾಳ ತಂದು ನಷ್ಟದಲ್ಲಿ ನಡೆಸುತ್ತಿದ್ದರು. ಈಗ ಆ ಹನಿಮೂನ್ ಕಾಲ ಮುಗಿದಿದೆ.

ಇನ್ನು ಓಲಾ / ಉಬರ್ ಚಾಲಕರಿಗೂ ಕೂಡಾ ಎಕ್ಸ್ಟ್ರಾ ಖರ್ಚು ಇರುತ್ತೆ. ಮೊಬೈಲ್ / ಟ್ಯಾಬ್ಲೆಟ್ ಡಿವೈಸ್, ಇಂಟರ್ನೆಟ್, ಓಲಾ / ಉಬರ್ ಸೇವಾ ಶುಲ್ಕ ಹೀಗೆ ಒಂದು ರೀತಿಯ ಹೊಸ ಖರ್ಚು ಇದ್ದರೆ ಗ್ರಾಹಕರ ಇದ್ದಲ್ಲೇ ಹೋಗಲು ಎಕ್ಸ್ಟ್ರಾ ಗ್ಯಾಸ್ ಖರ್ಚಾಗುತ್ತದೆ.

ಅಂದರೆ ಆ ಸೇವೆಯನ್ನು ಪಡೆಯಲು ಗ್ರಾಹಕ / ಚಾಲಕ ಬಾಡಿಗೆ ಮೇಲೆ ಅವರ ಸೇವೆಯ ಬೆಲೆ ಎಕ್ಸ್ಟ್ರಾ ನೀಡಲೇ ಬೇಕು ಆಗಲೇ ಈ ಸೇವೆ ಗ್ರಾಹಕರಿಗೆ / ಚಾಲಕ ನಿರಂತರ ದೊರಕಿ ನಾನು ಈ ಲೇಖನದಲ್ಲಿ ಮೇಲೆ ಹೇಳಿದ ಹಲವು ಸಮಸ್ಯೆಗಳಿಂದ ಗ್ರಾಹಕ ಹಾಗೂ ಚಾಲಕ ಇಬ್ಬರೂ ದೂರ ಆಗಬಹುದು.

ಈ ಸೇವೆಯ ಭಾರ ಬರಿ ಚಾಲಕ ಹೊತ್ತರೆ ಅವರಿಗೆ ಅನ್ಯಾಯ, ಹಾಗೆಯೆ ಗ್ರಾಹಕ ಹೊತ್ತರೂ ಅದೂ ಸರಿಯಲ್ಲ. ಇಬ್ಬರೂ ಹಂಚಿದರೆ ಅನುಕೂಲ. ಇಲ್ಲಾಂದ್ರೆ ಬರಿ ಗ್ರಾಹಕರು ಕ್ಯಾಬ್ / ಆಟೋ ಮೀಟರ್ ದರದ ಮೇಲೆ ಎಕ್ಸೆಸ್ ಫೀ ನೀಡಿ ಬಳಸುವಂತೆ ಮಾಡಬಹುದು. ಆಗ ಅಗತ್ಯ ಇರುವವರು ಮನೆಗೇ, ತಾನು ಇದ್ದಲ್ಲೇ ಗಾಡಿ ಬರಬೇಕು ಎಂದು ಬಯಸುವವರು ಬಳಸುತ್ತಾರೆ. ಬೇಡ ಅನ್ನುವವರಿಗೆ ಹೊರಗಡೆ ರಸ್ತೆಯಲ್ಲಿ ಸಾಮಾನ್ಯ ಕ್ಯಾಬ್ /ಆಟೋ ಮೀಟರ್ ಆಧಾರಿತ ಸೇವೆ ಸಿಕ್ಕೇ ಸಿಗುತ್ತೆ.

ಇನ್ನು ಸರಕಾರ ಅಥವಾ ಚ್ಯಾರಿಟಿ ಸಂಸ್ಥೆಗಳು ಹಣ ಹಾಕಿ ಇಂತಹ ಸೇವೆ ಉಚಿತವಾಗಿ ತರುತ್ತೇನೆ ಅಂದರೆ ಅದೂ ಕೂಡಾ ಅನುಕೂಲ. ಹಾಗಂತ ಇತರ ಆಯ್ಕೆಗಳನ್ನು ಗ್ರಾಹಕರಿಗೆ ಸಿಗದಂತೆ ತಡೆಯುವದು ಉಚಿತವಲ್ಲ. 

ನೆನಪಿಡಿ ಈ ಉಚಿತ ಅನ್ನುವದು ಬರೀ ಭ್ರಮೆ ಮಾತ್ರ. ಸರಕಾರ ನಡೆಸಿದರೂ ಅದಕ್ಕೆ ಟ್ಯಾಕ್ಸ್ ಹಣ ನಾವೇ ಕೊಡಬೇಕು. ನಾವು ತೆಗೆದು ಕೊಳ್ಳುವ ಇತರ ವಸ್ತುಗಳು, ನಮ್ಮ ಗಳಿಕೆಯ ಮೇಲೆ ಟ್ಯಾಕ್ಸ್ ಜಾಸ್ತಿ ಹಾಕಿ ನಮ್ಮ ಬಳಿಯೇ ವಸೂಲಿ ಮಾಡುತ್ತಾರೆ ಅಷ್ಟೇ! ಬೃಷ್ಟಾಚಾರದ ಕಾರಣ ಆ ವ್ಯವಸ್ಥೆ ಇಷ್ಟು ಚೆನ್ನಾಗಿರುವ ಸಾಧ್ಯತೆ ತೀರಾ ಕಡಿಮೆ.

ಯಾಕೆ ಗೊತ್ತಾ? ಆಗ ಚಾಲಕರಿಗೂ ಹೊಸ ಉಚಿತ ಸ್ಮಾರ್ಟ್ ಫೋನ್ ನಾಲ್ಕೈದು ವರ್ಷಕ್ಕೊಮ್ಮೆ, ಅದರ ರಿಪೇರಿ ಖರ್ಚು, ತಿಂಗಳ ಇಂಟರ್ನೆಟ್ ಖರ್ಚು ಕೂಡಾ ಸರಕಾರ ಕೊಡಬೇಕಾಗುತ್ತದೆ! ನಾವು ಬಿಟ್ಟರೆ  ಗ್ರಾಹಕರಿಗೂ ಉಚಿತ ಫೋನ್ / ಇಂಟರ್ನೆಟ್ ಸರಕಾರ ಕೊಡಲಿ ಎನ್ನಬಹುದು! 

ಈ ನಾಡಿನ ಜನ ಶ್ರಮಪಟ್ಟು ಗಳಿಸಿದ ಆದಾಯದಲ್ಲಿ ನೀಡಿದ ಟ್ಯಾಕ್ಸ್ ಹಣ ಸಾರ್ವಜನಿಕ ಸಾರಿಗೆ ಆದ ಬಸ್, ಟ್ರೇನ್ ಇನ್ನಷ್ಟು ಉತ್ತಮ ಗೊಳಿಸಲು ಬಳಕೆ ಆಗಲಿ. ಈ ಉಚಿತದ ಹೆಸರಲ್ಲಿ ಬೇರೆ ಕಡೆ ಸೋರಿಕೆ ಆಗುವದು ಬೇಡ ಅಲ್ವಾ?

ಒಂದು ವ್ಯವಸ್ಥೆಯ ಹಿಂದಿರುವ ಸಂಕೀರ್ಣತೆ ಅರಿಯದೆ ಯಾವುದೇ ತಂತ್ರಜ್ಞಾನ ಇಲ್ಲದೇ ನಾವೇ ಹುಡುಕಿ ಹೋಗುವ ಕ್ಯಾಬ್/ಆಟೋ ಹಾಗೂ ಒಲಾ/ಉಬರ್ ಕ್ಯಾಬ್/ಆಟೋ ಅನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿದರೆ ಆಗುವದು ಗೊಂದಲ ಮಾತ್ರ.

ಇನ್ನು ಆ ಸೇವೆಯ ಬೆಲೆ ಎಷ್ಟಿರಬೇಕು ಎಂಬುದು ಬೇಡಿಕೆಯ ಆಧಾರದಲ್ಲಿದ್ದರೇ ಸೂಕ್ತ. ಸರಕಾರ ಒಂದು ಖಾಸಗಿ ವ್ಯವಸ್ಥೆಯ ಖರ್ಚು ವೆಚ್ಚ ನೋಡದೇ ಹಣ ನಿಗದಿ ಮಾಡಿದರೆ ನಡೆಸಲಾಗದೇ ಸೇವೆಯೇ ನಿಲ್ಲುವ ಸಾಧ್ಯತೆ ಜಾಸ್ತಿ. 

ನೆನಪಿಡಿ ಈ ಸೇವೆ ಬಳಸುವ ಜನ ಆರ್ಥಿಕವಾಗಿ ಸಬಲ ಆಗಿರುವವರ ಸಂಖ್ಯೆ ಜಾಸ್ತಿ. ಅವರ ಬಳಿ ಸ್ಮಾರ್ಟ್ ಫೋನ್ ಇದೆ ಇಂಟರ್ನೆಟ್ ಇದೆ. ತಿಳುವಳಿಕೆ ಇದೆ. ಇದ್ದಲ್ಲೇ ಬರುವ ಕ್ಯಾಬ್/ಆಟೋ ಬಳಸಬೇಕೋ ಬೇಡೋ ಅವರೇ ನಿರ್ಧರಿಸಲಿ. ಏನಂತೀರಾ?

ಗ್ರಾಹಕರ ಒಳಿತಿಗಾಗಿ ಹೋರಾಡುವ ನೆಪದಲ್ಲಿ ಇರುವ ಓಲಾ/ಉಬರ್ ರೀತಿಯ ಉತ್ತಮ ಸೌಲಭ್ಯ ಕಳೆದು ಕೊಂಡರೆ ನಾವು ಮತ್ತೆ ಹಳೆಯ ವ್ಯವಸ್ಥೆಗೆ ಹೋಗಬೇಕು. ಅದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ! 

ಓಲಾ ಆಟೋ ಬ್ಯಾನ್ ಮಾಡುವದರಿಂದ ಮತ್ತೆ ಮೀಟರ್ ಹಾಕದೇ ಹೇಳಿದ ಬೆಲೆ ಕೊಡುವ ಅನಿವಾರ್ಯತೆ ಗ್ರಾಹಕರದ್ದಾಗಲಿದೆ. ಇಲ್ಲಾಂದ್ರೆ ಆಟೋ ಬದಲು ಓಲಾ / ಉಬರ್ ಕ್ಯಾಬ್ ಬಳಸ ಬೇಕು. ಅದೂ ಕೂಡಾ ಉತ್ತಮ ಪರ್ಯಾಯ ಮಾರ್ಗ.

ಇನ್ನು ಓಲಾ / ಉಬರ್ ಸೇವೆ ಬಳಸಲ್ಲ ನೇರವಾಗಿ ಆಟೋ / ಕ್ಯಾಬ್ ಬಳಸುತ್ತೇನೆ ಎನ್ನುವವರಿಗೆ ಮೀಟರ್ ಆಧಾರಿತ ಆಟೋ / ಕ್ಯಾಬ್ ಸೇವೆ ಲಭ್ಯ ರಸ್ತೆಗಳಲ್ಲಿ ಹೇಗೂ ಇದ್ದೇ ಇದೆ. ಅಲ್ವಾ? ಆಟೋ / ಕ್ಯಾಬ್ ಚಾಲಕರಿಗೂ ಮೀಟರ್ ಹಾಕಿ ಗ್ರಾಹಕರಿಗೆ ಸೇವೆ ನೀಡುವ ಸ್ವಾತಂತ್ರ್ಯ ಅವರು ಓಲಾ / ಉಬರ್ ಗೆ ರಿಜಿಸ್ಟರ್ ಆಗಿದ್ದರೂ ಆಗದಿದ್ದರೂ ಇದೆ. ಏನಂತೀರಾ? ನಿಮ್ಮ ಅನಿಸಿಕೆ ಏನು? ಕಮೆಂಟ್ ಹಾಕಿ.

ಓಲಾ / ಉಬರ್ ಸಮಸ್ಯೆಗಳು

ಹಾಗಂತ ಓಲಾ / ಉಬರ್ ಅಲ್ಲಿ ಸಮಸ್ಯೆ ಇಲ್ಲವೇ ಇಲ್ಲ ಏನಲ್ಲ. ಬನ್ನಿ ಯಾವವು ನೋಡೋಣ.

೧. ಆನ್ ಲೈನ್ ಪೇಮೆಂಟ್ ತಗೊಳ್ಳದ ಚಾಲಕರು

ಕೆಲವು ಚಾಲಕರು ಕ್ಯಾಶ್ ಬೇಕು ಎಂದು ಗ್ರಾಹಕರನ್ನು ಒತ್ತಾಯಿಸುತ್ತಾರೆ. ಅನೇಕ ಬಾರಿ ಕ್ಯಾನ್ಸೆಲ್ ಮಾಡುವದೂ ಇದೆ.

೨. ಬೇಡಿಕೆ ಆಧಾರದ ಮೇಲೆ ಜಾಸ್ತಿ ಬೆಲೆ ಆಗುವದು

ಪ್ರಾಮಾಣಿಕವಾಗಿ ಈ ಎಪ್ ಗಳು ಮೀಟರ್ ಮೇಲೆ ಅವರ ಸೇವೆಯ ಒಂದು ಚಾರ್ಜ್ ತೆಗೆದುಕೊಳ್ಳಬೇಕು. ಆದರೆ ಕೆಲವೊಮ್ಮೆ ತೀರಾ ದರ ಜಾಸ್ತಿ ಆಗುತ್ತೆ. ಬಹುಶಃ ಬೇಡಿಕೆ ಜಾಸ್ತಿ ಇದ್ದಾಗ ಹಾಗೆ ಮಾಡುತ್ತಾರೇನೋ. ಇದರ ಹಿಂದಿನ ಲಾಜಿಕ್ ನನಗೆ ಗೊತ್ತಿಲ್ಲ. ಇದು ನಿಲ್ಲಬೇಕು.

೩. ಡ್ಯೂಟಿ ಕ್ಯಾನ್ಸೆಲ್ ಅಥವಾ ಬರದ ಚಾಲಕರು

ಎಷ್ಟೋ ಬಾರಿ ಚಾಲಕರು ಬಂದು ಎಪ್ ಅಲ್ಲಿ ಕ್ಯಾನ್ಸೆಲ್ ಮಾಡಿ ಅಷ್ಟೇ ಹಣ ನಮಗೆ ಕೊಡಿ ಎಂದು ದುಂಬಾಲು ಬೀಳುತ್ತಾರೆ. ಅದು ಸರಿಯಲ್ಲ.  ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಹಾಗೆ ಮಾಡುವದು ಒಳ್ಳೆಯದಲ್ಲ. 

ಅದಕ್ಕೆ ಮುಖ್ಯ ಕಾರಣ ಒಲಾ/ಉಬರ್ ತಮ್ಮ ಸೇವೆಗೆ ತೆಗೆದುಕೊಳ್ಳುವ ಕಮಿಶನ್ ಕೂಡಾ ತನಗೆ ಬೇಕು ಅನ್ನುವ ದುರಾಸೆ ಮುಖ್ಯ ಕಾರಣ. ಒಲಾ / ಉಬರ್ ಇಲ್ಲದಿದ್ದರೆ ಈ ಡ್ಯೂಟಿ ತನಗೆ ಸಿಗುತ್ತಿರಲಿಲ್ಲ ಎಂಬ ಪ್ರಬುದ್ಧತೆ ಇರುವದಿಲ್ಲ. 

ಅನೇಕ ಬಾರಿ ಚಾಲಕರು ಡ್ಯೂಟಿ ಒಪ್ಪಿದ್ದರೂ ಬರುವದೇ ಇಲ್ಲ. ಇದು ಎಪ್ ಸಮಸ್ಯೆ ಸಹ ಇರಬಹುದು.

ಆದರೆ ಅನೇಕ ಬಾರಿ ಒಲಾ/ಉಬರ್ ಹಾಕುವ ಕ್ಯಾನ್ಸೆಲ್ ಚಾರ್ಜ್ ಗ್ರಾಹಕ ತೆರ ಬೇಕಾಗುತ್ತದೆ.

೩. ಕೊನೆಯ ಕ್ಷಣದಲ್ಲಿ ಕ್ಯಾನ್ಸೆಲ್ ಮಾಡುವ ಗ್ರಾಹಕರು

ಇನ್ನು ಗ್ರಾಹಕರೂ ಕೂಡಾ ಕ್ಯಾಬ್/ಆಟೋ ಹಲವು ಕಿಮಿ ದೂರದಿಂದ ಗ್ರಾಹಕ ಇರುವಲ್ಲಿಗೆ ತಲುಪುವದರ ಒಳಗೆ ಕ್ಯಾನ್ಸೆಲ್ ಮಾಡಿ ಬಿಡುತ್ತಾರೆ. ಆಗ ಚಾಲಕರಿಗೂ ನಷ್ಟ / ಕಂಪನಿಗೂ ನಷ್ಟ. ಅದನ್ನು ತಡೆಯಲು ಗ್ರಾಹಕರಿಗೆ ಕೆಲವು ಬಾರಿ ದಂಡ ವಿಧಿಸುತ್ತಾರೆ.

ಕೊನೆಯ ಮಾತು

ಒಟ್ಟಿನಲ್ಲಿ ಹೇಳುವದಾದರೆ ಓಲಾ / ಉಬರ್ ಸಾರ್ವಜನಿಕ ಸಾರಿಗೆಯಲ್ಲಿ ಕ್ರಾಂತಿ ಮಾಡಿದೆ ಎಂದರೆ ತಪ್ಪಲ್ಲ. ಅದನ್ನು ಬಳಸಿ ಸಮಯ, ಸುರಕ್ಷತೆ, ಅನುಕೂಲತೆ ಹೀಗೆ ಪ್ರಯೋಜನಗಳಿವೆ. ಆದರೆ ಆ ಸೇವೆ ನಾರ್ಮಲ್ ಮೀಟರ್ ಕ್ಯಾಬ್/ಆಟೋ ಗಿಂತ ಕಡಿಮೆಗೆ ನಾವು ಸಿಗುತ್ತೆ ಅಂದುಕೊಂಡರೆ ಸಮಂಜಸವಲ್ಲ.

ಈ ಸೇವೆಯ ಮಹತ್ವ ಏನು, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗ್ರಾಹಕ / ಚಾಲಕ ಇಬ್ಬರೂ ಅರಿತಾಗ ಅದಕ್ಕೆ ತೆರಬೇಕಾದ ಹೆಚ್ಚಿನ ಬೆಲೆ ಯಾಕೆ ಎಂಬ ಪ್ರಬುದ್ಧತೆ ಬರುತ್ತದೆ.

ಈ ಹಿಂದೆ ಮೀಟರ್ ಇಲ್ಲದೇ ಬಾಯಿಗೆ ಬಂದ ಬೆಲೆಗೆ ಆಟೋ / ಕ್ಯಾಬ್ ಅಲ್ಲಿಗೆ ಹೋಗುವ ಅನುಭವ ಆದ ಗ್ರಾಹಕರಿಗೆ ಓಲಾ/ಉಬರ್ ಮಹತ್ವ ಏನು ಎಂಬುದು ಗೊತ್ತು! ಏನಂತೀರಾ?

ಚಿತ್ರಕೃಪೆ: 

ಚಿತ್ರ ೧: Hanny Naibaho on Unsplash

ಚಿತ್ರ ೨: Pop & Zebra on Unsplash

ಚಿತ್ರ ೩: charlesdeluvio on Unsplash

© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ