Responsive Ad Slot

ವಿಸ್ಮಯಪುರಿ ಪರಿಚಯ

ವಿಸ್ಮಯಪುರಿ ಹೆಬ್ಬಾಗಿಲು

ನಮಸ್ಕಾರ. ಹೇಗಿದ್ದೀರಾ? ಆರಾಮಾ? ಬನ್ನಿ ಬನ್ನಿ ನಾನು ನಿಮಗಾಗೇ ಕಾಯ್ತಾ ಇದ್ದೆ! ಭೇಟಿ ಆಗಿ ತುಂಬಾ ದಿನ ಆಯ್ತು ಅಲ್ವಾ?

ನಾನು ರಾಜೇಶ ಹೆಗಡೆ ಅಂತಾ. ಹೊಟ್ಟೆಪಾಡಿಗೆ ಸಾಫ್ಟವೇರ್ ಇಂಜಿನಿಯರ್ ಕೆಲಸ ಮಾಡ್ಕೊಂಡು ಇದೀನಿ. ನನಗೆ ಕನ್ನಡ ಎಂದರೆ ಪಂಚಪ್ರಾಣ.

ವಿಸ್ಮಯಪುರಿ ಎಂಬ ಈ ಸುಂದರ ನಗರಿಗೆ ನನ್ನ ಆತ್ಮೀಯ ಸ್ವಾಗತ. 

ಇದು ನನ್ನ ಕನ್ನಡ ಲೇಖನಗಳ ತಾಣ! ಏನೋ ಒಂದಿಷ್ಟು ಓದಿದ್ದು, ಕೇಳಿದ್ದು, ತಿಳಿದಿದ್ದು, ನನ್ನ ಅನುಭವ ಹೀಗೆ ಎಲ್ಲಾ ಇಲ್ಲಿ ಹಂಚಿಕೊಳ್ಳಬೇಕು ಅಂತಾ ಆಸೆ.

ಅಯ್ಯೋ ಇನ್ನೂ ಯಾಕೆ ಹೆಬ್ಬಾಗಲಲ್ಲೇ ನಿಂತೀದೀರಾ? ಬನ್ನಿ ಒಳಗೆ ಹೋಗೋಣ. ಇಲ್ಲಿ ವಿಸ್ಮಯಪುರಿ ವೆಬ್ ಸೈಟ್ ಬಗ್ಗೆ ತಿಳಿಯೋಣ.

ಯಾಕೆ ಇದು ಬೇಕು? ಈ ತಾಣದ ಗುರಿ ಏನು?  ಬನ್ನಿ ವಿವರವಾಗಿ ನಿಮಗೆ ಹೇಳ್ತೀನಿ.

ವಿಸ್ಮಯಪುರಿ ಯಾಕೆ ಬೇಕು?

ನೋಡಿ ಇವ್ರೆ, ಇಂದು ಈ ಇಂಟರ್ನೆಟ್ಟು ದೊಡ್ಡ ಸಾಗರ. ಅಲ್ಲಿರೋ ಮಾಹಿತಿ ತುಂಬಾ. ಅಲ್ವರಾ?

ಆದರೆ ನಿಜ ಹೇಳಿ ನಿಮ್ಮನ್ನ ಸೂಜಿಗಲ್ಲಿನಂತೆ ಆಕರ್ಷಿಸುತ್ತಾ ಇರೋದು ಏನು? ಜ್ಞಾನ ಹಾಗೂ ಚಿಂತನೆ ಹೆಚ್ಚಿಸುವ ವಿಡಿಯೋ, ಪೋಸ್ಟ್ ಅಥವಾ ಲೇಖನಗಳಾ? 

ಅಥವಾ ವಿನಾಕಾರಣ ನಕಾರಾತ್ಮಕ ವಿಷಯ ತುಂಬೋ ಕಂಟೆಂಟಾ?  ಕ್ಷಣ ಕಾಲ ಸ್ಪೂರ್ತಿ ನೀಡಿ ಆದರೆ ನಿಮ್ಮ ಬದಲಾವಣೆಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡದ ಮೋಟಿವೇಶನ್ ಗಳಾ? 

ನೀವು ದಿನ ನಿತ್ಯ ಅಂತರ್ಜಾಲದಲ್ಲಿ, ಫೋನ್ ಅಲ್ಲಿ ಗಂಟೆಗಟ್ಟಲೆ ನೋಡೋ ರೀಲ್ಸ್, ವಿಡಿಯೋ, ಲೇಖನ, ಪೋಸ್ಟ್ ಎಷ್ಟರಮಟ್ಟಿಗೆ ನಿಮ್ಮ ಅರಿವು ಜಾಸ್ತಿ ಮಾಡೋಕೆ ಅಥವಾ ಜೀವನ ಇನ್ನು ಚೆನ್ನಾಗಿಸಲು ಸಹಾಯಕ? ಒಮ್ಮೆ ಕುಳಿತು ವಿಚಾರ ಮಾಡಿ.

ಅದಕ್ಕೇ ಕೇವಲ ಜ್ಞಾನ ಹಂಚಲು, ಉತ್ತಮ ಸಕಾರಾತ್ಮಕ ಚಿಂತನೆ ಮಾಡುವ, ಉತ್ತಮ ಜೀವನಕ್ಕೆ ಬೆಳಕು ತೋರ್ಸುವ ಒಂದು ಪುಟ್ಟ ತಾಣ ಕನ್ನಡದಲ್ಲಿದ್ದರೆ ಒಳ್ಳೇದು ಅಂತಾ ನನಗೆ ಅನ್ಸುತ್ತೆ. ನಿಮಗೆ ಏನನ್ಸುತ್ತೆ?

ನಾನು ಈ ವಿಸ್ಮಯಪುರಿ ಮಾಡಿದ್ದು ಅದೇ ಕಾರಣಕ್ಕೆ!!

ವಿಸ್ಮಯಪುರಿ.ಕಾಂ ಏನಿದು?

"ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ" ಇದು ಭಗವದ್ಗೀತೆಯಲ್ಲಿ ಬರುವ ಒಂದು ಶ್ಲೋಕ. ಇದನ್ನು ಶ್ರೀ ಕೃಷ್ಣ ಹೇಳಿದ್ದು. ಅದರರ್ಥ "ಜ್ಞಾನಕ್ಕೆ ಸಮನಾಗಿ ಹಾಗೂ ಅಷ್ಟು ಶುದ್ಧವಾದದ್ದು ಬೇರೇನೂ ಇಲ್ಲ".

ನಿಜ ಜ್ಞಾನ ಅರ್ಥಾತ್ ಅರಿವು ನಮ್ಮನ್ನು ತಿಳುವಳಿಕೆಯುಳ್ಳ ನಿರ್ಧಾರ ತೆಗೆದು ಕೊಳ್ಳಲು ಶಕ್ತಿ ನೀಡುತ್ತೆ.  ಅಷ್ಟೇ ಅಲ್ಲ ವಿಮರ್ಶಾತ್ಮಕ ಚಿಂತನೆಗೆ ಕೂಡಾ ಉತ್ತೇಜನೆ ಕೊಡುತ್ತೆ. ಮೋಸಗೊಳ್ಳುವದನ್ನು ತಪ್ಪಿಸುತ್ತೆ.

ಅದೇ ಸಮಯದಲ್ಲಿ ಹೊಸತನ ಮತ್ತು ಪ್ರಗತಿಯ ಮೂಲಕ ಸಮಾಜವನ್ನು ಸಹಾ ಮುನ್ನಡೆಸುತ್ತೆ. ಇದು ನಮ್ಮ ಸ್ವಂತ ಬೆಳವಣಿಗೆ ಮತ್ತು ಸಮಾಜದ ಅಭಿವೃದ್ಧಿಗೆ ಮೂಲಾಧಾರ ಕೂಡಾ.

ಹೀಗೊಂದು ಮನೋಹರ ವೆಬ್ ತಾಣ ಕಲ್ಪನೆ ಮಾಡಿ. ಕೇವಲ ಮನಸ್ಸಿಗೆ ಅರಿವು ಮೂಡಿಸೋ ಬರಹಗಳು. ಉಪಯುಕ್ತ ಪುಸ್ತಕಗಳ ಸಾರಾಂಶ. ಉಪಯುಕ್ತ ಮಾಹಿತಿಗಳು, ಚಿಂತನೆಗಳು ಹಾಗೂ ಮಾರ್ಗದರ್ಶಿಗಳು. ಬೇರೆ ಇನ್ನೇನೂ ಇಲ್ಲ. 

ಈ ಸಕಾರಾತ್ಮಕ ಚಿಂತನೆ ನಿಮ್ಮ ಮನಸ್ಸಿಗಷ್ಟೇ ಅಲ್ಲ ನಿಮ್ಮ ದೇಹದ ಆರೋಗ್ಯಕ್ಕೂ ಪೂರಕ. ಬರೆಯುವ ನನಗೂ ಒಳ್ಳೇದು ಅಲ್ವರಾ?

ನಾನು ವಿಷಯ ಬೇಕಿದ್ದರೆ ಓದಲಿ ಇಲ್ಲಾಂದ್ರೆ ಬಿಡಲಿ ಎಂಬ ಮನೋಭಾವದಲ್ಲಿ ಕೇವಲ ಮಾಹಿತಿ ನೀಡಲು ಬರೆದ ಲೇಖನಗಳು. ಯಾವುದೇ ಮಾರ್ಕೆಟಿಂಗ್ ತಂತ್ರ ಇಲ್ಲ. ಇರುವದನ್ನು ಇರೋ ಹಾಗೆ ನಿಮ್ಮ ಮುಂದಿಡುವ ಪ್ರಾಮಾಣಿಕ ಪ್ರಯತ್ನ. ಈ ವೆಬ್ ತಾಣದ ಹೆಸರು ವಿಸ್ಮಯಪುರಿ.

ಈ ವಿಸ್ಮಯಪುರಿಯಲ್ಲಿ ಜ್ಞಾನಕ್ಕೆ, ಮಾಹಿತಿಗೆ, ಉತ್ತಮ ಚಿಂತನೆಗೆ ಪ್ರಥಮ ಸ್ಥಾನ.

ಎಲ್ಲ ವಾಸ್ತವ ಹಾಗೂ ಅನುಭವ ಆಧಾರಿತ. ಜ್ಞಾನಕ್ಕೆ, ಪ್ರವಾಸಕ್ಕೆ, ಖರೀದಿಗೆ, ಹಣಕಾಸಿನ ನಿರ್ವಹಣೆಗೆ, ವ್ಯಾಪಾರಕ್ಕೆ, ಕನ್ನಡಕ್ಕೆ, ಸ್ವಂತ ಬೆಳವಣಿಗೆಗೆ ಹೀಗೆ ಹಲವು ಜೀವನಕ್ಕೆ ಪೂರಕ ಮಾಹಿತಿಗಳು, ಅನುಭವಗಳು, ಐತಿಹಾಸಿಕ, ಪುರಾಣದ ಸ್ಪೂರ್ತಿದಾಯಕ ತುಣುಕುಗಳು. ಓದಿ. ನಿಮ್ಮ ಅನಿಸಿಕೆ ಮುಕ್ತವಾಗಿ ಹೇಳಿ.

ಚೆನ್ನಾಗಿದ್ರೆ ಏನು ಇಷ್ಟ ಆಯ್ತು ಹೇಳಿ. ಇಷ್ಟ ಆಗಿಲ್ಲ ಅಂದ್ರೆ ಯಾಕೆ ಅಂತಾನೂ ಬರೀರಿ. ನಾನು ತಪ್ಪು ಹಾದಿ ಹಿಡಿದ್ರೆ ಉಗೀರಿ ಪರವಾ ಇಲ್ಲ. ನಾನು ಮನುಷ್ಯ ಅಲ್ವಾ? ನನ್ನಿಂದ ಸಹ ತಪ್ಪಾಗುತ್ತೆ ತಿದ್ದಿ ಕೊಳ್ತೀನಿ. ಓಕೆನಾ?

ವಿಸ್ಮಯಪುರಿಯ ಗುರಿ, ಉದ್ದೇಶ

ಸಮುದ್ರದಲ್ಲಿ ಗುರಿ ಇಲ್ಲದೇ ಎಲ್ಲಿಂದರಲ್ಲಿ ಹೋಗು ಅಂತಾ ದೋಣಿ ಬಿಟ್ಟರೆ ಎಲ್ಲೂ ಹೋಗಲ್ಲ. ಅಲ್ಲೇ ತಿರುಗಾಡ್ತಾ ಇರುತ್ತೆ. ಅಲ್ವರಾ? 

ವಿಸ್ಮಯಪುರಿಗೂ ಒಂದು ಗುರಿ ಬೇಕು. ಅದೇ ಕನ್ನಡದಲ್ಲಿ ಜ್ಞಾನ, ಚಿಂತನೆ ಹಂಚೋದು.

ಋಗ್ವೇದದಲ್ಲಿ ಒಂದು ಶ್ಲೋಕ ಹೀಗೆ ಆರಂಭ ಆಗುತ್ತೆ. "ಆ ನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ" ಇದರರ್ಥ "ಎಲ್ಲ ಕಡೆಯಿಂದ ಒಳ್ಳೆಯ ವಿಚಾರಗಳು ನಮ್ಮ ಬಳಿ ಬರಲಿ" ಅಂತಾ.

ಖಂಡಿತ, ಉತ್ತಮ ವಿಚಾರಗಳ ಧಾರೆಗೆ, ಮಾಹಿತಿಗೆ ನಿಮ್ಮ ಮನಸ್ಸನ್ನು ಒಡ್ಡಿಕೊಂಡಾಗ ನಿಮ್ಮ ಅಂತಃ ಪ್ರಜ್ಞೆಯ ಚಕ್ಷು ತೆರೆದು ನೀವು ಈ ಪ್ರಪಂಚ ನೋಡುವ ವಿಧಾನ, ನಿಮ್ಮ ನಡುವಳಿಕೆ ಬದಲಾಗುತ್ತದೆ.

ವಿಸ್ಮಯಪುರಿಯ ಉದ್ದೇಶ ಕೂಡಾ ಅದೇನೆ. ಎಲ್ಲಾ ಕಡೆಯಿಂದ ಒಳ್ಳೆ ವಿಚಾರ / ವಿಷಯ / ಮಾಹಿತಿ / ಚಿಂತನೆಗಳನ್ನು ಪಡೆದು ನಮ್ಮ ಕನ್ನಡದಲ್ಲಿ ನೀಡುವದು. ನೆನಪಿರಲಿ ಇದು ಸುದ್ದಿ ತಾಣ ಅಲ್ಲ! ಒಂದು ವಿಶಿಷ್ಟ ರೀತಿಯ ಬ್ಲಾಗ್!!

ಒಳ್ಳೆ ವಿಚಾರಗಳು, ಮಾಹಿತಿ, ಚಿಂತನೆ ನಮ್ಮ ಚೈತನ್ಯವನ್ನು ಹೆಚ್ಚಿಸಿ ಈ ಜೀವನವನ್ನು ಹೆಚ್ಚು ಸಂಭ್ರಮಿಸುವಂತೆ ಮಾಡುತ್ತದೆ. ಉಪಯುಕ್ತ ಮಾಹಿತಿಗಳು ಹಲವು ಕಡೆ ಬಳಕೆ ಸಹ ಆಗುತ್ತದೆ. ಅದೇ ವಿಸ್ಮಯಪುರಿಯ ಗುರಿ ಕೂಡಾ.

(ಜಾಗತಿಕ / ದೇಶ / ಕರ್ನಾಟಕ) ಮಟ್ಟದ ಉಪಯುಕ್ತ ಮಾಹಿತಿ, ಚಿಂತನೆ ಸರಳ ಕನ್ನಡದಲ್ಲಿ  ನೀಡುವದೇವಿಸ್ಮಯಪುರಿ.ಕಾಂ ತಾಣದ ಗುರಿ.

ಯಾವ ವಿಷಯಗಳಿರಲಿವೆ?

 ಇಲ್ಲಿ ಮುಖ್ಯವಾಗಿ ಈ ಕೆಳಗಿನ ವಿಭಿನ್ನ ವಿಷಯಗಳ ಬಗ್ಗೆ ನಾನು ಓದಿದ್ದು, ಅನುಭವಗಳನ್ನು ಬರೀತೀನಿ.

  • ಸ್ವಂತ ಬೆಳವಣಿಗೆ
  • ವ್ಯಾಪಾರ
  • ಪ್ರವಾಸ
  • ಬಾಲವಿಸ್ಮಯ (ಮಕ್ಕಳಿಗೆ ಮಾಹಿತಿ)

 ಹೀಗೆ ಥರೇವಾರಿ ವಿಷಯಗಳ ಲೇಖನ ಇಲ್ಲಿ ಇರುತ್ತೆ. ಇಷ್ಟಕ್ಕೆ ಅಂತಾ ಮಿತಿ ಇಲ್ಲ ಉಪಯುಕ್ತ, ಗೊತ್ತಿದ್ದರೆ ಚೆನ್ನ ಎನಿಸಿದರೆ ಬರೆದು ಬಿಡುವೆ. ಓಕೆನಾ?

 ಹಂಸ ಕ್ಷೀರ ನ್ಯಾಯದಂತೆ ಇಲ್ಲಿ ನಿಮಗೆ ಅನುಕೂಲವಾದದ್ದನ್ನು ಆಯ್ಕೆ ಮಾಡಿ ಓದಿ. ಉಳಿದದ್ದನ್ನು ಬಿಟ್ಟು ಬಿಡಿ. ಎಲ್ಲವನ್ನು ಎಲ್ಲರೂ ಓದಬೇಕೆಂದೇನಿಲ್ಲ! ಅಲ್ವರಾ?

ವಿಸ್ಮಯಪುರಿಯಲ್ಲಿರುವ ಪ್ರತಿ ಲೇಖನ ಸಕಾರಾತ್ಮಕ ಆಗಿರುತ್ತೆ. ಸಮಸ್ಯೆಗಳಿಗೆ ಕಾರ್ಯರೂಪಕ್ಕೆ ಬರುವಂತಹ ಪರಿಹಾರ ನೀಡುವ ಹಾಗೆ ಇರುತ್ತೆ. ಕಠಿಣ ಜೀವನ ಎದುರಿಸಲು  ತಿಳುವಳಿಕೆಯ ಭಂಡಾರವನ್ನೇ ನಿಮಗೆ ನೀಡುತ್ತೆ.

ಬನ್ನಿ ವಿಸ್ಮಯಪುರಿಯಲ್ಲಿ ಅರಿವು ಹೆಚ್ಚಿಸುವ ತಿರುಗಾಟ ಮಾಡಿ. ಓದಿ, ಹುಡುಕಿ ಹಾಗೂ ವೈಭವಯುತ ವಿಸ್ಮಯಪುರಿಯ ಲೇಖನಗಳ ಸುಧೆ ನಿಮ್ಮ ವಿವೇಚನೆಯನ್ನು ಶ್ರೀಮಂತ ಮಾಡಲಿ.

ನಿಮ್ಮ ಬೆಂಬಲ ಇರಲಿ

ವಿವೇಕದ ಭಂಡಾರವನ್ನು ನಿಮ್ಮ ನೆಂಟರು, ಮಿತ್ರರೊಂದಿಗೆ ಕೂಡಾ ಹಂಚಿ, ಸುಜ್ಞಾನ ಪ್ರಸಾರಕ್ಕೆ ನಾಂದಿ ಹಾಡಿರಿ. ಓಕೆನಾ?

ವಿಸ್ಮಯಪುರಿಯ ಪ್ರತಿ ಪದ, ಪ್ರತಿ ಪುಟ ತಿಳುವಳಿಕೆಯ ಮಿಡಿತಕ್ಕೆ ಪ್ರಾಮಾಣಿಕವಾಗಿ ಹಾತೊರೆಯಲಿವೆ. ಅದರ ಬಗ್ಗೆ ಯಾವುದೇ ಸಂಶಯ ಬೇಡ.

ವಿಸ್ಮಯಪುರಿಯಲ್ಲಿ ನಿಮ್ಮ ಹಿನ್ನೆಲೆ ಏನೇ ಇರಲಿ ಈ ಕಲ್ಪನಾ ನಗರಿಯಲ್ಲಿ ಹೆಕ್ಕಿಕೊಳ್ಳಲು ವಿವಿಧ ರೀತಿಯ ಜ್ಞಾನದ ಮರದ ಹಣ್ಣುಗಳಿವೆ. ನಿಮಗಿಷ್ಟದ ಕ್ಷೇತ್ರದ ಹಣ್ಣಿನ ರಸ ಹೀರಿ ತಿಂದು ಕೃತಾರ್ಥರಾಗಿ! 

ಜ್ಞಾನದ ದೇವತೆಯಾದ ಸರಸ್ವತಿಯನ್ನು ಸ್ಮರಿಸಿ ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆಗೆ ಒಯ್ಯುವಂತೆ ಕೋರಿ  ಕೊಳ್ತಿನಿ. ಆಯ್ತಾ?

ನಿಮ್ಮ ಸಲಹೆ, ಟೀಕೆ, ಅನಿಸಿಕೆಗೆ ನಮ್ಮ ಕಮೆಂಟ್ ಬಾಕ್ಸ್ ಯಾವಾಗಲೂ ತೆರೆದಿದೆ. ನಿಮ್ಮ ಆಶೀರ್ವಾದ ಹಾಗೂ ಬೆಂಬಲ ವಿಸ್ಮಯಪುರಿಯ ಮೇಲಿರಲಿ. ಆಯ್ತಾ? ಗೊತ್ತಿಲ್ಲದೇ ಎಲ್ಲೇ ತಪ್ಪಾದರೂ ತಿಳಿಸಿ ಸರಿಪಡಿಸುವೆ.

ಇನ್ಯಾಕೆ ತಡ ಆಗಾಗ ಈ ಸುಂದರ ನಗರಿಗೆ ಭೇಟಿ ಕೊಟ್ಟು ಇಲ್ಲಿನ ಲೇಖನಗಳ ಬಗ್ಗೆ ಜಿಜ್ಞಾಸೆ ನಡೆಸಿ. ಆಯ್ತಾ?

ಹುಂ ಮರೆತೇ ಬಿಟ್ಟೆ ನನ್ನ ಇನ್ನೊಂದು ತಾಣ ಇದೆ. ಅದನ್ನೂ ನೋಡ್ತಾ ಇರಿ.

ಪದ ಮಂಜರಿ (padamanjari.com) - ಕನ್ನಡ ಪದಗಳ ಅರ್ಥ, ವಿವರಗಳು

ನನಗೆ ಕೆಲಸ ತುಂಬಾ ಇದೆ. ಬರ್ತಿನಿ. ಮತ್ತೆ ಸಿಗೋಣ. ವಂದನೆಗಳು. ನೀವು ಆರಾಮಾಗಿ ವಿಸ್ಮಯಪುರಿಯ ಹಿತಕರ ವಾತಾವರಣದಲ್ಲಿ ಓಡಾಡಿ ಇಲ್ಲಿನ ಸುಂದರ ಕ್ಷಣಗಳಿಗೆ ಸಾಕ್ಷಿ ಆಗಿ. ಆಯ್ತಾ?

ಇಂತಿ ನಿಮ್ಮವ
--ರಾಜೇಶ ಹೆಗಡೆ

ವಿಶೇಷ ಸೂಚನೆ: ಇಲ್ಲಿ ವಿಸ್ಮಯಪುರಿಯ ನನ್ನ ಸುಂದರ ಕಲ್ಪನೆ ಚಿತ್ರ ರೂಪಕ್ಕೆ ತಂದಿದ್ದು ಏಐ (ಕೃತಕ ಬುದ್ಧಿಮತ್ತೆ). ಹೀಗೆ ಚಿತ್ರ ನೀವೇ ಹೇಗೆ ಮಾಡೋದು ಅಂತಾ ಟೈಮ್ ಸಿಕ್ಕಾಗ ಮತ್ತೆ ಹೇಳ್ತಿನಿ ಆಯ್ತಾ?

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ